ಬೆಂಗಳೂರು,ಏ.05 :
ರಾಜ್ಯದಲ್ಲಿ ಇಂದು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತೆ ಅರ್ಧ ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆ ಮೀರಿದ ರೆರ್ಕಾಡ್ ಮಾಡಿದೆ. ಅಲ್ಲದೇ ಸೋಂಕಿತರಾದಂತ 346 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 23106 ಸೇರಿದಂತೆ ರಾಜ್ಯಾಧ್ಯಂತ 50112 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1741046 ಗೆ ಏರಿಕೆಯಾಗಿದೆ. ಇವರಲ್ಲಿ ಇಂದು 26841 ಜನರು ಸೇರಿದಂತೆ ಇದುವರೆಗೆ 1236854 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 487288 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಇನ್ನೂ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 161 ಸೋಂಕಿತರು, ಬಾಗಲಕೋಟೆಯಲ್ಲಿ ಮೂವರು, ಬಳ್ಳಾರಿಯಲ್ಲಿ 19 ಜನರು, ಬೆಳಗಾವಿಯಲ್ಲಿ 2, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5, ಚಾಮರಾಜನಗರದಲ್ಲಿ 5, ಬೀದರ್ ಜಿಲ್ಲೆಯಲ್ಲಿ 8, ಚಿಕ್ಕಬಳ್ಳಾಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 04, ಚಿತ್ರದುರ್ಗ 01, ದಾವಣಗೆರೆ 02, ಧಾರವಾಡ 08, ಗದಗ 03, ಹಾಸನ 11, ಹಾವೇರಿ 04, ಕಲಬುರ್ಗಿ 15, ಕೋಲಾರ 05, ಮಂಡ್ಯ 19, ಮೈಸೂರು 10, ರಾಯಚೂರು 03, ರಾಮನಗರ 02, ಶಿವಮೊಗ್ಗ 15, ತುಮಕೂರು 12, ಉಡುಪಿ 03, ಉತ್ತರ ಕನ್ನಡ 15 ಹಾಗೂ ವಿಜಯಪುರ ಜಿಲ್ಲೆಯಲ್ಲಿ ನಾಲ್ವರು ಸೇರಿದಂತೆ 346 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 16884ಕ್ಕೆ ಏರಿಕೆಯಾಗಿದೆ.
ಇನ್ನೂ ಇದೇ ಸಂದರ್ಭದಲ್ಲಿ ಪ್ರತಿದಿನ ಹೆಲ್ತ್ ಬುಲೆಟಿನ್ ಮಾದರಿಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಒಟ್ಟು ಬೆಡ್ ಗಳ ಕುರಿತು ಬುಲೆಟಿನ್ ಪ್ರಕಟಿಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಆರೋಗ್ಯಸೌಧದಲ್ಲಿ ಇರುವ ಕರ್ನಾಟಕ ವಾರ್ ರೂಮಿಗೆ (ಬೆಂಗಳೂರು ಹೊರತುಪಡಿಸಿ) ಭೇಟಿ ನೀಡಿ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಹಾಸಿಗೆ ಲಭ್ಯವಾಗುತ್ತಿಲ್ಲ. ಹಾಸಿಗೆ ನೀಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಆರ್ ಅಶೋಕ್ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಂಡವನ್ನು ರಚನೆ ಮಾಡಿದ್ದಾರೆ. ಅದರ ಭಾಗವಾಗಿ ಬುಧವಾರ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆ, ಬಳಕೆಯಾಗಿರುವ ಬೆಡ್ ಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಕೋವಿಡ್ ವಾರ್ ರೂಂ ಗೆ ಸಚಿವರಾದ ಬೊಮ್ಮಾಯಿ, ಆರ್ ಅಶೋಕ್ ಮತ್ತು ವಾರ್ ರೂಂ ಮುಖ್ಯಸ್ಥ ಅರವಿಂದ್ ಲಿಂಬಾವಳಿ ಸಭೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ಪ್ರತಿ ದಿವಸ ಎಷ್ಟು ಬೆಡ್ ಗಳು ಖಾಲಿಯಿವೆ. ಎಷ್ಟು ಬೆಡ್ ಗಳು ಭರ್ತಿಯಾಗಿವೆ. ಯಾವ ಯಾವ ವಿಭಾಗದ ಬೆಡ್ ಗಳು ಭರ್ತಿಯಾಗಿವೆ ಎಂಬುದರ ಕುರಿತು ಪಾರದರ್ಶಕವಾದ ಬುಲೆಟಿನ್ ನ್ನು ಬಿಡುಗಡೆ ಮಾಡಲಾಗುವುದು. ಎರಡು-ಮೂರು ದಿನಗಳಲ್ಲಿ ಇದಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂತರ್ಜಾಲ ಮಾಹಿತಿ
ವರದಿ : ವಸಂತ ಬಿ ಈಶ್ವರಗೆರೆ