ಶಿವಮೊಗ್ಗ: ಕೊರೋನಾ ವೈರಸ್’ಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಇದರ ನಡುವೆಯೇ ಅದೃಷ್ಟಶಾಲಿಗಳೆಂಬಂತೆ ವೈರಸ್ ವಿರುದ್ಧ ಹೋರಾಡಿ ಜಯಿಸುತ್ತಿರುವವರ ಸಂಖ್ಯೆ ಕೂಡ ದೊಡ್ಡದಾಗಿಯೇ ಬೆಳೆಯುತ್ತಿದೆ.

ಶಿಕಾರಿಪುರದಲ್ಲಿ 92 ವರ್ಷದ ವೃದ್ಧೆ ಸೇರಿ ಒಂದೇ ಕುಟುಂಬದ 11 ಮಂದಿ ಕೊರೋನಾ ಗೆದ್ದಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾಗಿ ಆತಂಕಕ್ಕೊಳಗಾಗಿರುವವರಿಗೆ ಹೊಸ ಆಶಾಭಾವನೆ ಮೂಡಿಸಿದ್ದಾರೆ.

ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ತಾಳಗುಂದ ಹೋಬಳಿ ಮಾಳಗೊಂಡನಕೊಪ್ಪ ಗ್ರಾಮದ ಹಿರಿಯಜ್ಜಿ ಇಂದಿರಾ ಬಾಯಿ ಅವರ ಇಡೀ ಕುಟುಂಬವೇ ಕೊರೋನಾ ಸೋಂಕಿಗೊಳಗಾಗಿತ್ತು.

ಇದೀಗ ಕುಟುಂಬದ 92 ವರ್ಷದ ಅಜ್ಜಿ ಇಂದಿರಾಬಾಯಿ, 70 ವರ್ಷದ ಪುತ್ರ ಸುಶೀಲೇಂದ್ರರಾವ್‌, ಮೊಮ್ಮಗ ನವೀನ್ ಕುಲಕರ್ಣಿ, ವಿಜಯ್ ಕುಲಕರ್ಣಿ ಸೇರಿ ಕುಟುಂಬದ ಎಲ್ಲಾ 11 ಮಂದಿಯೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ನವೀನ್ ಕುಲಕರ್ಣಿ ಹಾಗೂ ಅವರ ಸಹೋದರನ ಪತ್ನಿ ಜ್ವರದಿಂದ ಬಳಲುತ್ತಿದ್ದು, ಸ್ಥಳೀಯ ವೈದ್ಯರ ಬಳಿ ಹೋಗಿದ್ದಾರೆ. ಈ ವೇಳೆ ಔಷಧಿ ನೀಡಿದ ವೈದ್ಯರೂ. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಇಬ್ಬರೂ ಕೊರೋನಾ ಪರೀಕ್ಷೆ ನಡೆಸಿದ್ದಾರೆ. 7 ದಿನಗಳ ಬಳಿಕ ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ವೈದ್ಯಕೀಯ ಪರೀಕ್ಷಾ ವರದಿ ಬರುವವರೆಗೂ ನಾವು ವೈದ್ಯರು ನೀಡಿದ್ದ ಔಷಧಿಗಳನ್ನೇ ತೆಗೆದುಕೊಳ್ಳುತ್ತಿದ್ದೆವು. ಪಾಸಿಟಿವ್ ಬಂದ ಕೂಡಲೇ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದೆವು ಎಂದು ನವೀನ್ ಹೇಳಿದ್ದಾರೆ.

ಬಳಿಕ ವೈದ್ಯರು ಕುಟುಂಬದ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸುವಂತೆ ತಿಳಿಸಿದ್ದರು. ಏಪ್ರಿಲ್ 17 ರಂದು ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಬಳಿಕ ಎಲ್ಲರಿಗೂ ಪಾಸಿಟಿವ್ ಬಂದಿತ್ತು. ಎಲ್ಲರನ್ನೂ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 21 ಮತ್ತು 24 ಮಧ್ಯೆಯೇ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾದೆವು ಎಂದು ತಿಳಿಸಿದ್ದಾರೆ.

ಈ ದೊಡ್ಡ ಕುಟುಂಬದಲ್ಲಿ ಕೆಲವರು ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಹಾಗೂ ಅದೇ ದಿನ ದಾವಣಗೆರೆಯಲ್ಲಿ ನಡೆದ ಸಂಬಂಧಿಕರ ಸಮಾರಂಭದಲ್ಲಿ ಇನ್ನು ಕೆಲವರು ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾದ ಬಳಿಕ ಕುಟುಂಬ ಸದಸ್ಯರಲ್ಲಿ ಕೊರೋನಾ ಲಕ್ಷಣಗೆಳು ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ.

ಸೋಂಕು ಎಲ್ಲಿಂದ ಹರಡಿತು ಎಂಬುದು ನಮಗೂ ಖಚಿತಾಗಿ ತಿಳಿಯುತ್ತಿಲ್ಲ. ಆದರೆ, ದೇವರ ದಯೆ ಹಾಗೂ ಸೂಕ್ತ ಸಮಯಕ್ಕೆ ವೈದ್ಯರೂ ನೀಡಿದ ಚಿಕಿತ್ಸೆಯಿಂದ ಗುಣಮುಖರಾಗಿದ್ದೇವೆ. ಇದೀಗ ಇಡೀ ಕುಟುಂಬ 8-10 ದಿನ ಹೋಮ್ ಐಸೋಲೇಷನ್ ನಲ್ಲಿ ಇರಲಿದ್ದೇವೆಂದು ನವೀನ್ ಹೇಳಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!