ಶಿವಮೊಗ್ಗ; ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸ ಚಿಂತನೆಗಳು ಮೂಡಬೇಕು. ಹೊಸಬರು ಹೊಸ ಕನಸುಗಳೊಂದಿಗೆ ಈ ಸಾಹಿತ್ಯ ಪರಿಷತ್ತನ್ನು ಕಟ್ಟಬೇಕು ಎಂದು ಹೇಳಿದ ಶ್ರೀ ಮುರುಘಾಮಠ ಆನಂದಪುರ ಮತ್ತು ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ.ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಪತ್ರಕರ್ತ, ಸಾಹಿತಿ, ಸಂಘಟಕ ಶಿ.ಜು.ಪಾಶರವರಿಗೆ ಸನ್ಮಾನಿಸಿ ಆಶೀರ್ವದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಅಜೀವ ಸದಸ್ಯರೂ ಆಗಿರುವ ಡಾ.ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಪರಿಷತ್ತಿನಲ್ಲಿ ಜಾತಿ ರಾಜಕಾರಣ ಮತ್ತು ರಾಜಕೀಯ ನುಸುಳಲೇ ಬಾರದು. ಸಾಹಿತ್ಯ ಪರಿಷತ್ತು ತನ್ನದೇ ಆದ ಇತಿಹಾಸ ಮತ್ತು ಗೌರವವನ್ನು ಹೊಂದಿದೆ. ಈ ಗೌರವಕ್ಕೆ ಜಾತಿ ಮತ್ತು ರಾಜಕಾರಣ ಧಕ್ಕೆ ಒದಗಿಸಬಾರದು. ರಾಜಕಾರಣ ಮಾಡಲು ಮತ್ತು ಜಾತಿ ಕುರಿತ ಹೋರಾಟಗಳಿಗೆ ಬೇರೆಯದೇ ಮೀಸಲು ವೇದಿಕೆಗಳಿವೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ಎರಡನ್ನೂ ಹೊರತುಪಡಿಸಿ ಸಾಹಿತ್ಯದ್ದೇ ಆದ ಚಿಂತನ-ಮಂಥನಗಳು ನಡೆಯಬೇಕು. ಆ ಮೂಲಕ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಿಂತ ನೀರಾಗಬಾರದು. ಇಲ್ಲಿ ಹೊಸತನ ಕಂಡುಬರಬೇಕು. ಹೊಸಬರಿಗೂ ಅವಕಾಶ ಸಿಗುವಂತಾಗಬೇಕು ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಿ.ಜು.ಪಾಶರವರಿಗೆ ಆತ್ಮೀಯವಾಗಿ ಆಶೀರ್ವದಿಸಿದ ಶ್ರೀ ಶ್ರೀಗಳು ಒಳಿತಾಗಲೆಂದು ಹೇಳಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರೂ, ಕಸಾಪದ ಅಜೀವ ಸದಸ್ಯರೂ ಆದ ಎಸ್.ಕೆ.ಗಜೇಂದ್ರ ಸ್ವಾಮಿ, ಜಿ.ಪದ್ಮನಾಭ್, ಶಾಂತಿ ಏಜೆನ್ಸಿಸ್‌ನ ಪಾಲುದಾರರಾದ ಪ್ರಭಾಕರ ಅಂಚಟಗೆರೆ, ಸುಧೀರ್, ಜಿ.ಚಂದ್ರಶೇಖರ್, ಮಾನವ ಹಕ್ಕುಗಳ ವೇದಿಕೆಯ ನಾಗರಾಜ್ ನಾಯ್ಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.