ಶಿವಮೊಗ್ಗ: ಟ್ರೇಡ್ ಲೈಸೆನ್ಸ್ ಸರಳೀಕೃತಗೊಂಡಿದ್ದು ಇನ್ನೂ ಮುಂದೆ ಮಧ್ಯವರ್ತಿಗಳ ಸಹಾಯವಿಲ್ಲದೆ ವ್ಯಾಪಾರಸ್ಥರಿಗೆ ದೊರೆಯಲಿದೆ. ಈ ಬಗ್ಗೆ ಇಂದು ನಡೆದ ಆರೋಗ್ಯ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನಗರದಲ್ಲಿ ೧೬ ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರಿದ್ದು, ಕೇವಲ ೩ ಸಾವಿರದಷ್ಟು ಮಾತ್ರ ವ್ಯಾಪಾರ ಪರವಾನಿಗೆ ನೋಂದಣಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪಾರಸ್ಥರ ಸಂಘದ ಕೋರಿಕೆಯಂತೆ ದಿಟ್ಟ ನಿರ್ಧಾರಕೈಗೊಂಡಿದ್ದು, ಮೇ ೧ರಿಂದ ನೀವು ಟ್ರೇಡ್ಲೈಸೆನ್ಸ್ ಪಡೆಯಲು ಆಧಾರ್ ಕಾರ್ಡ್ ಮತ್ತು ಸ್ವಯಂ ಪ್ರಮಾಣ ಪತ್ರ ನೀಡಿದರೆ ಸಾಕು. ೭ ದಿನಗಳೊಳಗೆ ನಿಮ್ಮ ಕೈಗೆ ಟ್ರೇಡ್ ಲೈಸೆನ್ಸ್ ಸಿಗುತ್ತದೆ.
ಆನ್ ಲೈನ್ ಮೂಲಕ ಅರ್ಜಿ ಹಾಕಿ ಕೂಡ ಲೈಸೆನ್ಸ್ ಪಡೆಯಬಹುದು. ಪಾಲಿಕೆ ಸುತ್ತಾಡುವ ಅವಶ್ಯಕತೆಯಿಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದು, ಏಪ್ರಿಲ್ ೨೦ರಿಂದ ಟ್ರೇಡ್ ಲೈಸೆನ್ಸ್ಗೆ ಹೊಸ ಕ್ರಮಕೈಗೊಂಡಿದ್ದು, ನಿಗಧಿತ ಫಾರಂನ್ನು ಭರ್ತಿ ಮಾಡಿ, ಆಧಾರ್ ಕಾರ್ಡ್ ಮತ್ತು ಅಫಿಡೇವಿಟ್ ನೀಡಿದರೆ ಸಾಕು. ಆನ್ಲೈನ್ ಪೇಮೆಂಟ್ ಮಾಡಬಹುದು ಅಥವಾ ನಗದಾಗಿಯೂ ಹಣ ಕಟ್ಟಬಹುದು. ಹಿಂದಿನ ವರ್ಷದ ಬಾಕಿ ಇದ್ದರೂ ಸಹ ಅದನ್ನು ಹಾಗೆ ತಡೆಹಿಡಿದು, ೨೧-೨೨ನೇ ಸಾಲಿನ ಲೈಸೆನ್ಸ್ನ್ನು ಯಾವುದೇ ವಿಳಂಬವಿಲ್ಲದೆ ಅಥವಾ ಯಾವುದೇ ದಾಖಲೆಗಳನ್ನು ಕೇಳದೆ ನೂತನ ಸಾಲಿನ ಲೈಸೆನ್ಸ್ನ್ನು ೩ ವರ್ಷದ ಅವಧಿಗೆ ಪಡೆಯಬಹುದಾಗಿದೆ.
ಒಟ್ಟು ೧೧೫ ವಿಭಾಗಗಳಿದ್ದು, ಅದಕ್ಕೆ ನಿಗಧಿಪಡಿಸಿದ ಶುಲ್ಕ ಕಟ್ಟಿದರೆ ಸಾಕು. ಆದರೆ, ಈ ಲೈಸೆನ್ಸ್ನ್ನು ವ್ಯಾಪಾರಕ್ಕಾಗಿ ಮಾತ್ರ ಬಳಸಬೇಕು. ಅಕ್ರಮ-ಸಕ್ರಮ ಮೊದಲಾದ ಕಾನೂನಾತ್ಮಕ ವಿವಾದಗಳಿಗೆ ಈ ಪರವಾನಿಗೆ ಅನ್ವಯವಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಒಂದು ಬಾರಿ ಟ್ರೇಡ್ ಲೈಸೆನ್ಸ್ ನೀಡಿದ್ದಲ್ಲಿ ಶಾಶ್ವತವಾಗಿ ಅದನ್ನು ಪರಿವರ್ತಿಸುವ ಬಗ್ಗೆಯೂ ರಾಜ್ಯ ಸರ್ಕಾರಕ್ಕೆ ಪಾಲಿಕೆಯ ವತಿಯಿಂದ ಪ್ರಸ್ತಾವನೆ ಸಲ್ಲಿಸಲು ಕೂಡ ತೀರ್ಮಾನಿಸಲಾಯಿತು.
ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಕ್ಯಾರಿ ಬ್ಯಾಗ್ ನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಭೆಯಲ್ಲಿ ಆಯುಕ್ತರು ವ್ಯಾಪಾರಸ್ಥರಿಗೆ ಮನವಿ ಮಾಡಿದರು. ಆದರೆ, ಈ ಸಂದರ್ಭದಲ್ಲಿ ಹೆಚ್ಚಿನ ವ್ಯಾಪಾರಸ್ಥರು ಮೊದಲು ಪಾಲಿಕೆಯ ವತಿಯಿಂದ ಪ್ಲೆಕ್ಸ್ ಬ್ಯಾನ್ ಮಾಡಿ, ನಮಗೆ ಪ್ಲಾಸ್ಟಿಕ್ ನಿಯಂತ್ರಿಸಲು ತಿಳಿಸುತ್ತೀರಿ, ನಗರದೆಲ್ಲೆಡೆ ಬೇಕಾಬಿಟ್ಟಿ ಪ್ಲೆಕ್ಸ್ಗಳು ರಾರಾಜಿಸುತ್ತಿವೆ. ಲಕ್ಷಾಂತರ ಬಂಡವಾಳ ಹಾಕಿ ತೆರಿಗೆ ಕಟ್ಟಿ ಅಂಗಡಿಗಳ ಮುಂದೆ ಪ್ಲೆಕ್ಸ್ಗಳ ಹಾವಳಿಯಿಂದಾಗಿ ವ್ಯಾಪಾರ ಇಲ್ಲದಂತಾಗಿದೆ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ಲೆಕ್ಸ್ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಲಾಯಿತು. ಹಾಗೂ ಗಾಂಧಿಬಜಾರ್ನ ಫುಟ್ ಪಾತ್ನಲ್ಲಿ ಬೇಕಾಬಿಟ್ಟಿಯಾಗಿರುವ ಅಂಗಡಿಗಳು ಮತ್ತು ತಳ್ಳುವ ಗಾಡಿಗಳ ನಿಯಂತ್ರಣಕ್ಕೆ ಪಾಲಿಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಛೇಂಬರ್ ಆಫ್ ಕಾಮರ್ಸ್ ಕಛೇರಿಯಲ್ಲಿ ಕೂಡ ಪಾಲಿಕೆ ವತಿಯಿಂದ ಟ್ರೇಡ್ ಲೈಸೆನ್ಸ್ ನೀಡಲು ಪಾಲಿಕೆ ವತಿಯಿಂದಲೇ ವ್ಯವಸ್ಥೆ ಮಾಡುವಂತೆ ವ್ಯಾಪಾರಸ್ಥರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೇಯರ್, ಉಪ ಮೇಯರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ದೀರರಾಜ್ ಹೊನ್ನವಿಲೆ, ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ವಾಸುದೇವ್, ಗಾಂಧಿ ಬಜಾರ್ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.