ಶಿವಮೊಗ್ಗ, ಏ.04:
ರೈತ ಚಳವಳಿ ಬೆಂಬಲಿಸಿ ಏಕಾಂಗಿ “ದೆಹಲಿ ಚಲೋ” ಕಾಲ್ನಡಿಗೆ ಯಾತ್ರೆ ಆರಂಭಿಸಿರುವ ಬಾಗಲಕೋಟೆಯ ಸಾಹಸಿ ಯುವಕ ನಾಗರಾಜ್ ಕಲ್ಲುಕುಟುಕರ್ ಅವರು ಪಾದಯಾತ್ರೆಯಲ್ಲಿ ನಿನ್ನೆ ಸಂಜೆ ಶಿವಮೊಗ್ಗ ತಲುಪಿದರು.
ರಾಜ್ಯದ ದಕ್ಷಿಣ ಗಡಿ ಪ್ರದೇಶವಾದ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟದಿಂದ ಕಳೆದ ಒಂದೂವರೆ ತಿಂಗಳ ಹಿಂದೆ ಪಾದಯಾತ್ರೆ ಆರಂಭಿಸಿದ ಶ್ರೀಯುತ ನಾಗರಾಜ್ ನಿನ್ನೆ ಮಂಗಳೂರಿನಿಂದ ಸಾಗರ ತಲುಪಿ ಶಿಕಾರಿಪುರದ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು.


ಶಿವಮೊಗ್ಗದ ಗಡಿ ಸಮೀಪದಲ್ಲಿ ವಿಶಿಷ್ಠ ಪಾದಯಾತ್ರಿ ನಾಗರಾಜ್ ಅವರನ್ನು ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯ ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಯಾದವ್ , ಪತ್ರಕರ್ತ ಕಾಮ್ರೇಡ್ ಲಿಂಗಪ್ಪ, ಶಿವಮೊಗ್ಗ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಆರ್.ಟಿ. ನಟರಾಜ್, ಸಂಘಟನಾ ಕಾರ್ಯದರ್ಶಿ ಇಂದೂಧರ ಇತರರು ಸ್ವಾಗತಿಸಿದರು.
ಆನಂತರ ನಡೆದ ಔಪಚಾರಿಕ ಸಭೆಯಲ್ಲಿ ಮಾತನಾಡಿದ ನಾಗರಾಜ್ ಕಲ್ಲುಕುಟುಕರ್ ದೇಶದ ರೈತರು ಭವಿಷ್ಯದಲ್ಲಿ ತಮಗೊದಗುವ ಅಪಾಯದ ಕುರಿತು ಎಚ್ಚೆತ್ತುಕೊಂಡು ಕೈಗೊಂಡಿರುವ ಹೋರಾಟ ಸಮಯೋಚಿತವಾಗಿದೆ, ಉಪಯೋಗಕ್ಕೆ ಬಾರದ ಹರಟೆ-ಭಾಷಣ ವಾದ-ವಾಗ್ವಾದಗಳಲ್ಲಿ ಕಾಲ ಕಳೆಯುವ ಬದಲು ವಿಭಿನ್ನವಾಗಿ ರೈತ ಹೋರಾಟವನ್ನು ಬೆಂಬಲಿಸುವ ಪ್ರಯತ್ನವಾಗಿ ಈ ಪಾದಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು.


ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಇಂದು ದೇಶದಲ್ಲಿ ತಾಂಡವವಾಡುತ್ತಿರುವ ಹಸಿವು ಬಡತನ ನಿರುದ್ಯೋಗಗಳ ಕುರಿತು ಚಿಂತಿಸ ಬೇಕಾದ ನಮ್ಮ ಯುವಜನರು ವಾಸ್ತವವಲ್ಲದ ವಿಷಯಗಳ ಹುಂಬತನಕ್ಕೆ ಬಲಿಯಾಗಿರುವ ಈ ಸಂದರ್ಭದಲ್ಲಿ ಶ್ರೀಯುತ ನಾಗರಾಜ್ ಅವರ ನಡೆ ನಿಜಕ್ಕೂ ಮಾದರಿಯಾದದು, ಅವಾಸ್ತವದಿಂದ ವಾಸ್ತವಿಕತೆಯೆಡೆಗೆ ಪರಿವರ್ತನೆ ಹೊಂದಲು ನಾಗರಾಜ್ ಕಲ್ಲುಕುಟುಕರ್ ಇಡೀ ರಾಜ್ಯದ ಯುವಜನಾಂಗಕ್ಕೆ ಆಶಾಕಿರಣವಾಗಿದ್ದಾರೆ ಎಂದು ಶ್ಲಾಘಿಸಿ ಪಾದಯಾತ್ರೆಗೆ ಯಶ ಹಾರೈಸಿದರು.


ಲಂಕೇಶ್ ಪತ್ರಿಕೆಯ ಬಿ. ಚಂದ್ರೆಗೌಡ, ರಿಪ್ಪನ್ ಪೇಟೆ ಟಿ.ಆರ್. ಕೃಷ್ಣಪ್ಪ, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ವೀರೇಶ್, ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಗೌರವ ಅಧ್ಯಕ್ಷ ಜಿ.ಎಲ್. ಜನಾರ್ಧನ್, ಆಮ್ ಆದ್ಮಿ ಪಕ್ಷದ ಸುರೇಶ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತ ಸಂಘದ ಮುಖಂಡರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಂ.ಎಸ್ಸಿ., ಎಂ.ಟೆಕ್ ಉನ್ನತ ಪದವೀಧರರಾದ ನಾಗರಾಜ್ ಅವರು ಮೂಲತ: ವಿಜ್ಞಾನಿ, ಆನಂತರ ಐ.ಟಿ. ಕ್ಷೇತ್ರ ಪ್ರವೇಶಿಸಿ ಹೊರದೇಶಗಳಲ್ಲಿ ದೊಡ್ಡ ಹುದ್ದೆ ನಿರ್ವಹಿಸಿದವರು, ಲಕ್ಷಾಂತರ ರೂಪಾಯಿಗಳ ಸಂಬಳ ತೊರೆದು ಬಂದು ಮಾದರಿಯಾದ ಸೇವೆ ಮಾಡಬೇಕೆಂಬ ಆಶಯದೊಂದಿಗೆ ಪಾದಯಾತ್ರೆಯಂತಹ ಕಠಿಣ ಹಾದಿ ಹಿಡಿದಿದ್ದಾರೆ.
ನಾಗರಾಜ್ ಏ-3ರ ರಾತ್ರಿ ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಿ ಈ ದಿನ ಏ-4 ರಂದು ಬೆಳಿಗ್ಗೆ 9=00 ಘಂಟೆಗೆ ಭದ್ರಾವತಿಗೆ ತೆರಳಲಿದ್ದಾರೆ, ಆನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾದಯಾತ್ರೆ ಮುಂದುವರಿಯಲಿದೆ.

By admin

ನಿಮ್ಮದೊಂದು ಉತ್ತರ

error: Content is protected !!