ಶಿವಮೊಗ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನ ಮರೆತಿದ್ದು ಕೂಡಲೇ ಎರಡು ಸರ್ಕಾರಗಳು ಅವುಗಳನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಸಭೆಯನ್ನ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ನೀತಿಯಿಂದಾಗಿ ರೈತರು ಕಾರ್ಮಿಕರು ದುಡಿಯುವ ವರ್ಗ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಬದಿ ವ್ಯಾಪಾರಿಗಳು ಬೀದಿಗೆ ಬರುವಂತಾಗಿದೆ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಂತಾಗಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ನಷ್ಟ ಉಂಟಾಗಿ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ, ಆದರೂ ಸಹ ಎರಡು ಸರ್ಕಾರಗಳು ರೈತರ ಸಹಾಯಕ್ಕೆ ಬಂದಿಲ್ಲ ಎಂದು ದೂರಿದರು.


ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯುವುದಾಗಿ ಮತ್ತು ಅನೇಕ ರೈತ ಪರವಾದ ವಿಚಾರಗಳನ್ನು ಜಾರಿಗೆ ತರುವುದಾಗಿ ಚುನಾವಣಾ ಸಂದರ್ಭದಲ್ಲಿ ಹೇಳಿದ್ದರು, ಆದರೆ ಇದ್ಯಾವುದನ್ನು ಕಾರ್ಯಗತಗೊಳಿಸಿಲ್ಲ ರೈತರ ಸಮಸ್ಯೆಗಳನ್ನ ಕೂಲಂಕುಶವಾಗಿ ಚರ್ಚಿಸುವ ಸಲುವಾಗಿ ಮೂರು ದಿನಗಳ ಕಾಲ ಜನತಾ ಅಧಿವೇಶನವನ್ನು ಕರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶರಾವತಿ ಮುಳುಗಡೆ ಸಂತ್ರಸ್ಥರ ಜಮೀನನ್ನ ಅರಣ್ಯ ಇಲಾಖೆಯಿಂದ ಡಿ ನೋಟಿಫೈ ಮಾಡಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಯಾವುದೇ ಕಾರಣಕ್ಕೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಮತ್ತು ಕೂಡಲೇ ಇವರುಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ರೈತ ಸಮುದಾಯಕ್ಕೆ ಎಂಎಸ್‌ಪಿಯನ್ನು ಮೌಲ್ಯಾಧಾರಿತವಾಗಿ ಕಾನೂನು ಬದ್ಧ ಮಾಡಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ನಿರ್ಣಾಯ ಕಳಿಸಿ ಕೊಡಬೇಕು ಕೇಂದ್ರ ಸರ್ಕಾರ ಸಹ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಘೋಷಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯನ್ನು ಕೂಡಲೇ ಕೈಬಿಡಬೇಕು. ರೈತ ಪರವಾದ ಬೆಳೆ ವಿಮೆ ಜಾರಿ ಮಾಡಬೇಕು, ಬೆಳೆ ವಿಮೆಯನ್ನು ಮುಂದಿನ ಬೆಳೆ ಬಿತ್ತುವ ಅವಧಿ ಒಳಗೆ ರೈತರ ಖಾತೆಗೆ ಪಾವತಿ ಮಾಡಬೇಕು ಅತಿವೃಷ್ಟಿ ಅನಾವೃಷ್ಟಿ ಬರಗಾಲ ಪರಿಹಾರ ಮಾರ್ಗಸೂಚಿಯ ದರ ಹೆಚ್ಚಿಸಬೇಕು ಅಲ್ಲದೇ ತಕ್ಷಣವೇ ಪರಿಹಾರವನ್ನ ನೀಡಬೇಕು ಎಕರೆಗೆ ಕನಿಷ್ಠ ೨೦ ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.


ರೈತನ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನೀಡಬೇಕು ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತ ಮಹಿಳೆಯರ ಮೈಕ್ರೋ ಫೈನಲ್ ಸಾಲವನ್ನು ಸಹ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.


ಇನ್ನು ಹಲವು ಬೇಡಿಕೆಗಳನ್ನ ನಮ್ಮ ಸಂಘಟನೆ ಎರಡು ಸರ್ಕಾರಗಳಿಗೆ ನೀಡುತ್ತಿದ್ದು ಅವೆಲ್ಲವನ್ನು ಕೂಡ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ, ಕರ್ನಾಟಕ ಜನ ಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ ಎಲ್ ಅಶೋಕ್, ಪಂಚಾಕ್ಷರಿ, ಹನುಮಂತಪ್ಪ, ಕಸಟ್ಟಿ ರುದ್ರೇಶ್, ಕೆ ರಾಘವೇಂದ್ರ ಚಂದ್ರಪ್ಪ ಹನುಮಮ್ಮ, ಮುಂತಾದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!