ಶಿವಮೊಗ್ಗ,ಅ.೨೫: ಇನ್ನಾದರೂ ರಾಜಕಾರಣಿಗಳು ಖಾಸಗಿ ವಿಚಾರಗಳ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹಿರಿಯ ರಾಜಕಾರಣಿ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದ್ದಾರೆ.
ಅವರು ಇಂದು ಸುದ್ಧಿಗಾರರೊಂದಿಗೆ ಮಾತನಾಡಿ, ಸಚಿವ ಭೈರತಿ ಸುರೇಶ್ರವರೇ ಹಿರಿಯ ರಾಜಕಾರಣಿ ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದು ಆಕಸ್ಮಿಕ ಸಾವು ಈ ಘಟನೆ ನಡೆದು ೨೫ ವರ್ಷಗಳೇ ಆಗಿವೆ. ಆದರೆ ಈ ಘಟನೆಯನ್ನು ಈಗ ತಂದು ಅವರ ಕುಟುಂಬಕ್ಕೆ ನೋವು ಮಾಡಿದ್ದಾರೆ. ಸ್ವರ್ಗದಲ್ಲಿರುವ ಮೈತ್ರಾದೇವಿಯವರ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಅದೇ ರೀತಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಾವಿನ ಬಗ್ಗೆಯೂ ಮಾತನಾಡಿದ್ದಾರೆ. ಇದು ಕೂಡ ಸರಿಯಲ್ಲ. ಈ ಇಬ್ಬರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸ್ವಲ್ಪವಾದರೂ ನೈತಿಕತೆ ಇದ್ದರೆ ಇವರು ಸಾರ್ವಜನಿಕ ಕ್ಷಮೆ ಕೇಳಬೇಕು ಎಂದರು.
ಅಲ್ಲದೇ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಅವರು ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದಾರೆ. ಜಾತಿಗಣತಿ ಬಗ್ಗೆ ಅನೇಕ ಸ್ವಾಮೀಜಿಗಳು ಅಭಿಪ್ರಾಯಗಳನ್ನು ಹೇಳಿದ್ದಾರೆ. ಹಾಗೆಯೇ ಇವರು ಕೂಡ ಹೇಳಿದ್ದಾರೆ. ಆಯೋಧ್ಯೆಯ ಬಗ್ಗೆ ಮಾತನಾಡಲು ಹರಿಪ್ರಸಾದ್ರಿಗೆ ಯಾವ ಯೋಗ್ಯತೆಯೂ ಇಲ್ಲ, ಸಾಧು ಸಂತರ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತ ಇರಲಿ ಎಂದರು.
ಸಿ.ಪಿ.ಯೋಗೀಶ್ವರ್ ಕಾಂಗ್ರೆಸ್ ಸೇರಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಯಾರು ಮಿತ್ರರು ಅಲ್ಲ, ಯಾರು ಶತೃಗಳು ಅಲ್ಲ, ಆದರೆ ಸಿದ್ದಾಂತಗಳನ್ನು ಬಿಡಬಾರದು ಅಷ್ಟೇ. ಯಾವುದೇ ಪಕ್ಷಕ್ಕೆ ಸಿದ್ದಾಂತಗಳೇ ಮುಖ್ಯವಾಗಿರುತ್ತದೆ ಎಂದರು.
ಬಿಜೆಪಿಯಲ್ಲಿ ಯಾವ ಸಿದ್ಧಾಂತಗಳು ಈಗ ಇಲ್ಲವಾಗಿವೆ. ಕುಟುಂಬ ರಾಜಕಾರಣ ಇಲ್ಲ ಎನ್ನುತ್ತಾರೆ. ಆದರೆ ಬೊಮ್ಮಾಯಿ ಮಗ ಅವರಿಗೆ ಶಿಗ್ಗಾವಿಯಲ್ಲಿ ಟಿಕೇಟ್ ನೀಡಿದ್ದಾರೆ. ಬಿಜೆಪಿಯಲ್ಲಿ ಶುದ್ಧೀಕರಣವೇ ಇಲ್ಲದ್ದಂತಾಗಿದೆ. ಮೂರು ಪಕ್ಷದಲ್ಲೂ ಕುಟುಂಬ ರಾಜಕಾರಣಗಳು ನಡೆಯುತ್ತಿವೆ. ಮೋದಿಯವರೆಗೆ ಅವಮಾನ ಮಾಡುವ ರೀತಿಯಲ್ಲಿ ಪಕ್ಷದ ಮುಖಂಡರು ನಡೆದುಕೊಳ್ಳುತ್ತಿದ್ದಾರೆ ಎಂದರು.
ಬ್ರಿಗೇಡ್ ಸ್ಥಾಪನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದುತ್ವ ಮತ್ತು ರಾಷ್ಟ್ರಭಕ್ತಿ ಬೆಳೆಸುವ ನಿಟ್ಟಿನಲ್ಲಿ ಬ್ರಿಗೇಡ್ ಸ್ಥಾಪನೆಗೆ ಈಗಾಗಲೇ ಚಿಂತನೆಗಳು ನಡೆದಿವೆ. ಹಲವು ಸಭೆಗಳು ಕೂಡ ವಿವಿಧ ಭಾಗಗಳಲ್ಲಿ ನಡೆಸಲಾಗಿವೆ. ಸಂಕ್ರಾಂತಿ ಹಬ್ಬದ ನಂತರ ಕೂಡಲಸಂಗಮದಲ್ಲಿ ಸುಮಾರು ಸಾವಿರ ಸಾಧುಸಂತರು ಹಾಗೂ ಲಕ್ಷಾಂತರ ಭಕ್ತರು ಒಟ್ಟಿಗೆ ಸೇರಿ ಚರ್ಚಿಸಿ ಬ್ರಿಗೇಡ್ಗೆ ಒಂದು ಹೆಸರು ಸೂಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.