ಶಿವಮೊಗ್ಗ: ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಸಮಾಜದ ಶಾಂತಿಯ ಬಗ್ಗೆ ಕೆಲಸ ನಿರ್ವಹಿಸಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ ಪೊಲೀಸರಿಗೆ ಕಿವಿಮಾತು ಹೇಳಿದರು.

ಅವರು ಇಂದು ಡಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪೊಲೀಸರ ಸೇವೆ ಅತ್ಯಮೂಲ್ಯವಾದುದು. ಅವರ ಬದ್ಧತೆ ಶ್ಲಾಘನೀಯ. ತಮ್ಮ ಕೆಲಸದ ಅವಧಿಯಲ್ಲಿ ಮರಣ ಹೊಂದಿದ ಹುತಾತ್ಮ ಪೊಲೀಸರನ್ನು ಸ್ಮರಣೆ ಮಾಡಿಕೊಳ್ಳುವುದು. ನಮ್ಮ ಕರ್ತವ್ಯವಾಗಿದೆ. ಒಂದು ಅಂಕಿ ಅಂಶದ ಪ್ರಕಾರ ದೇಶದಲ್ಲಿ ಸೈನಿಕರಿಗಿಂತ ಪೊಲೀಸರೇ ಹೆಚ್ಚು ಹುತಾತ್ಮರಾಗಿದ್ದಾರೆ. ಇದನ್ನು ನೋಡಿದರೆ ಪೊಲೀಸರ ಕೆಲಸ ಎಷ್ಟು ಕಠಿಣವಾದುದು ಮತ್ತು ಒತ್ತಡದಲ್ಲಿರುತ್ತದೆ ಎಂದು ಗೊತ್ತಾಗುತ್ತದೆ ಎಂದರು.

ಬಹುಶಃ ಪೊಲೀಸರು ಹೆಚ್ಚು ಟೀಕೆಗೆ ಒಳಗಾಗುತ್ತಿದ್ದಾರೆ. ರಾಜಕೀಯ ಕ್ಷೇತ್ರದಿಂದ ಹಿಡಿದು ಮಾಧ್ಯಮ ಕ್ಷೇತ್ರದವರೆಗೂ ಪೊಲೀಸರನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ಆದರೆ, ಪೊಲೀಸರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಮ್ಮ ಕರ್ತವ್ಯವನ್ನು ಅವರು ನಿಭಾಯಿಸಿದರೆ ಸಮಾಜ ಸ್ವಸ್ಥವಾಗಿರುತ್ತದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ತುಂಬಾ ಚೆನ್ನಾಗಿದೆ. ಇದಕ್ಕಾಗಿ ಜಿಲ್ಲೆಯ ಪೊಲೀಸ್ ಇಲಾಖೆಗೆ ಅಭಿನಂದನೆ ಹೇಳುತ್ತೇನೆ. ಪೊಲೀಸರು ಸಮಾಜದ ಎಲ್ಲಾ ಸ್ತರಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಅನೇಕ ಬಾರಿ ನ್ಯಾಯಾಧೀಶರಂತೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೊಂದು ಜವಾಬ್ದಾರಿಯುತ ಕೆಲಸ. ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ನಮ್ಮೆಲ್ಲರ ಶ್ರದ್ಧಾಂಜಲಿ ಇರಲಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹುತಾತ್ಮರ ಪಟ್ಟಿಯನ್ನು ಓದಿದರು. ಜಿಪಂ ಸಿಇಒ ಹೇಮಂತ್, ಎಎಸ್‍ಪಿ ಅನಿಲ್ ಕುಮಾರ್ ಭೂಮರೆಡ್ಡಿ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!