ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಲುಷಿತ ಕುಡಿಯುವ ನೀರು ಬರುತ್ತಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನೂರಾರು ಜನ ಬಲಿಯಾಗುವ ಮುನ್ನ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಶುದ್ಧ ಕುಡಿಯುವ ನೀರು ಕೊಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಾ ಪಾನ ಗಂಗಾ ಸ್ನಾನ ಎಂಬ ನಾಣ್ಣುಡಿ ಸುಳ್ಳು ಮಾಡಲು ನೀರು ಸರಬರಾಜು ಮಂಡಳಿ ಅಧಿಕಾರಿಗಳು ನಿರ್ಧರಿಸಿದಂತಿದೆ. ತೀವ್ರ ಮಳೆಯಿಂದ ಕೆಸರುಗದ್ದೆಯ ಮಣ್ಣು ನೀರಿನೊಂದಿಗೆ ಬೆರೆತು ಈ ರೀತಿ ಆಗುತ್ತಿದೆ ಎಂದು ಸಾರ್ವಜನಿಕರು ಬಿಸಿ ಮಾಡಿ ನೀರು ಕುಡಿಯುವಂತೆ ಅಧಿಕಾರಿಗಳು ಕುಂಟುನೆಪ ಹೇಳುತ್ತಿದ್ದಾರೆ. ಶಿವಮೊಗ್ಗ ನಗರಕ್ಕೆ ಮಳೆಯೇನು ಹೊಸದಲ್ಲ, ಇದಕ್ಕಿಂತ ನೂರು ಪಟ್ಟು ಜಾಸ್ತಿ ಮಳೆ ಬಂದಿದೆ. ನೀರು ಶುದ್ಧೀಕರಣ ಘಟಕದ ನಿರ್ವಹಣೆಯ ಸಂಪೂರ್ಣ ವೈಫಲ್ಯದಿಂದಾಗಿ ಈ ಸಮಸ್ಯೆಯಾಗಿದೆ. ಅಲ್ಲಿ ಶುದ್ಧೀಕರಣದ ಯಾವ ಮಾನದಂಡಗಳನ್ನೂ ಪಾಲಿಸುತ್ತಿಲ್ಲ. ಕ್ಲೋರಿನ್ ಮತ್ತು ಆಲಂ ನಿರ್ದಿಷ್ಟ ಪ್ರಮಾಣದಲ್ಲಿ ಬಳಸುತ್ತಿಲ್ಲ. ಆಯುಧಪೂಜೆ ದಿನವೂ ಕೂಡ ಬಾಳೆಕಂದು ಮತ್ತು ಬಲೂನ್ ಕಟ್ಟಿದ್ದು ಬಿಟ್ಟರೆ ಶುದ್ಧೀಕರಣ ಘಟಕದ ಸ್ವಚ್ಚತೆ ಮಾಡಿಲ್ಲ. ಯಂತ್ರಗಳು ಕೆಟ್ಟು ನಿಂತು ಎರಡು ತಿಂಗಳ ಮೇಲಾಗಿದೆ. ಪ್ರಯೋಗಾಲಾಯ ಕೂಡ ನಿಷ್ಕ್ರಿಯವಾಗಿದೆ. ಅಲ್ಲಿ ನೀಡುವ ವರದಿ ಕೂಡ ನಂಬಲರ್ಹವಲ್ಲ, ನೀರನ್ನು ಪ್ರತಿದಿನ ಮೆಗ್ಗಾನ್ ಪ್ರಯೋಗಾಲಯದಲ್ಲಿ ನೀಡಿ ವರದಿ ಪಡೆಯಬೇಕು.
ಈಗಾಗಲೇ ನಗರದ ಎಲ್ಲಾ ಆಸ್ಪತ್ರೆಗಳು ವಾಂತಿ ಭೇದಿ ಮತ್ತು ವಿವಿಧ ಜ್ವರ, ಕಾಯಿಲೆಗಳಿಂದ ಪ್ರಮುಖವಾಗಿ ಜಾಂಡೀಸ್ ನಿಂದ ಬಳಲುತ್ತಿರುವುದು ಕಂಡು ಬರುತ್ತಿದ್ದು, ವಿವಿಧ ಪರೀಕ್ಷೆಗಳಿಗೆ ಕನಿಷ್ಟ 2 ಸಾವಿರ ರೂ. ಪ್ರತಿದಿನ ಖರ್ಚು ಮಾಡುತ್ತಿದ್ದಾರೆ. ಮೆಗ್ಗಾನ್ ಪರೀಕ್ಷಾ ಕೇಂದ್ರದಲ್ಲಿ ಕಾಲಿಡಲು ಜಾಗವಿಲ್ಲ. ಈ ಬಗ್ಗೆ ಡಿಹೆಚ್ಒ ಅವರ ಬಳಿ ಕೇಳಿದರೆ ಅವರು ನೀರಿನಿಂದ ಸಮಸ್ಯೆ ಎಂದು ಹೇಳುತ್ತಾರೆ ಎಂದರು.
2016ರಲ್ಲೇ ಶುದ್ಧ ಕುಡಿಯುವ ನೀರು 24*7 ನೀಡುತ್ತೇವೆ ಎಂದು ಹೇಳಿ ಪಾಲಿಕೆಯಿಂದ ಜಲಮಂಡಳಿ ವಹಿಸಿಕೊಂಡು 8 ವರ್ಷ ಕಳೆದರೂ ಇನ್ನೂ ಶೇ. 50 ರಷ್ಟು ಕಾಮಗಾರಿ ಮುಗಿಸಿಲ್ಲ. ಶುದ್ಧ ಕುಡಿಯುವ ನೀರೂ ಇಲ್ಲ. 24*7 ಕೂಡ ನೀರಿಲ್ಲ. ಜನ ಅನಿವಾರ್ಯವಾಗಿ ಬಾಟಲಿ ನೀರಿನ ಮೊರೆ ಹೋಗಿದ್ದು, ಜನರ ತಾಳ್ಮೆ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದು, ಜನ ರೊಚ್ಚಿಗೆದ್ದರೆ ಅಧಿಕಾರಿಗಳ ಪರಿಸ್ಥಿತಿ ಹೀನಾಯವಾಗಲಿದೆ ಎಂದರು.
ಇದರಲ್ಲಿ ಮಹಾನಗರ ಪಾಲಿಕೆ ಜವಾಬ್ದಾರಿಯೂ ಇದೆ. ಹಸ್ತಾಂತರ ಮಾಡಿದಾಕ್ಷಣ ಪಾಲಿಕೆ ಜವಾಬ್ದಾರಿ ನಿಲ್ಲುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ರೀತಿ ಮುಂದುವರೆದರೆ ಜಿಲ್ಲಾ ಜೆಡಿಎಸ್ ನಿಂದ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ದೀಪಕ್ ಸಿಂಗ್, ಸಿದ್ದಪ್ಪ, ಸಂಗಯ್ಯ, ಮಧು, ಗೋಪಿ, ಗೋವಿಂದರಾಜ್, ಮಂಜುನಾಥ್, ಲೋಹಿತ್, ಚಂದ್ರಶೇಖರ್ ಮೊದಲಾದವರಿದ್ದರು.