ಶಿವಮೊಗ್ಗ,ಸೆ.21: ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರತಿಷ್ಠಿತ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ, ಪದ್ಮಭೂಷಣ ಪ್ರಶಸ್ತಿ ವಿಜೇತರು ಆದ ಕುವೆಂಪುರವರ ಹೆಸರಿಡಲು ಕ್ರಮ ಕೈಗೊಳ್ಳಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಅವರು ಇಂದು ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಹೆಮ್ಮೆಯ ಕವಿ ಸಾಹಿತಿ ಕುವೆಂಪು ಅವರು ಹಲವಾರು ರಾಜ್ಯ ಮತ್ತು ಕೇಂದ್ರ ಪ್ರಶಸ್ತಿಗಳನ್ನು ಪಡೆದಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರಿಶ್ರಮದಿಂದ ಮಂಜೂರಾಗಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಸೂಕ್ತವಾಗಿದ್ದು, ಅದೇ ಹೆಸರನ್ನು ಇಡಬೇಕು ಎಂದು ಟ್ರಸ್ಟ್ ಒತ್ತಾಯಿಸಿದೆ.
ಹಾಗೂ ಈ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವಣ್ಣನವರ ಹೆಸರನ್ನು ನಾಮಕರಣ ಮಾಡಿ, ಕರ್ನಾಟಕ ಸರ್ಕಾರ ಸಂಪುಟ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರೂ ಕೇಂದ್ರ
ಸರ್ಕಾರ ಅನುಮೋದನೆ ಮಾಡಿ ಉದ್ಘೋಷಣೆ ಮಾಡಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರ ಜೊತೆಗೆ ಸಂಸದರು ವ್ಯವಹರಿಸಿ ಕೂಡಲೇ ಕುವೆಂಪು ಹೆಸರನ್ನು ನೂತನ ವಿಮಾನ ನಿಲ್ದಾಣಕ್ಕೆ ಘೋಷಿಸಬೇಕು. ಜೊತೆಗೆ ವಿಮಾನ ನಿಲ್ದಾಣದ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲು ಒತ್ತಾಯಿಸಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಡಾ. ಶೇಖರ್ ಗೌಳೇರ್, ಎಸ್.ವಿ.ರಾಜಮ್ಮ , ಪ್ರೊ. ಕಲ್ಲಣ್ಣ, ಜನಮೇಜಿರಾವ್, ಜಿ.ವಿ.ಮಂಜುಳಾ, ಟಿ.ಬಿ.ಸೋಮಶೇಖರಯ್ಯ, ಸಿರಿಗೆರೆ ಚೆಲುವಣ್ಣ, ಶಂಕರನಾಯಕ, ನಾಗೇಶ್ರಾವ್, ಟಿ.ಹೆಚ್.ಬಾಲು, ನೂರುಲ್ಲಾ, ನರಸಿಂಹಮೂರ್ತಿ ಮೊದಲಾದವರು ಇದ್ದರು.