ಶಿವಮೊಗ್ಗ: ವಿದ್ಯಾರ್ಥಿ ಮತ್ತು ಉಪನ್ಯಾಸಕರ ನಡುವೆ ಆಪ್ತ ಸಂಬಂಧ ಇರಬೇಕು. ಮಕ್ಕಳ ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಿದರೆ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ ಎಂದು ಕಟೀಲು ಅಶೋಕ್ ಪೈ ಮೆಮೋರಿಯಲ್‌ ಕಾಲೇಜಿನ ಪ್ರಾಚಾರ್ಯೆ ಡಾ.ಸಂಧ್ಯಾ ಕಾವೇರಿ ಹೇಳಿದರು.


ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಜಿಲ್ಲಾ ಉಪನಿರ್ದೇಶಕರ ಕಚೇರಿ, ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರ ಮತ್ತು ಉಪನ್ಯಾಸಕರ‌  ಸಮಾಜ ಶಾಸ್ತ್ರ ವೇದಿಕೆ ಆಶ್ರಯದಲ್ಲಿ ಬುಧವಾರ ಸರ್ಕಾರಿ ನೌಕರರ ಭವನದಲ್ಲಿ ನಡೆದ ಪುನಶ್ಚೇತನ, ನಿವೃತ್ತರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.


ಹದಿಹರೆಯದ ಸಮಸ್ಯೆಗಳು ಮತ್ತು ಆಪ್ತ ಸಮಾಲೋಚನೆ ವಿಷಯ ಕುರಿತು ಮಾತನಾಡಿದ ಸಂಧ್ಯಾ ಕಾವೇರಿ ಅವರು, ಆಧುನಿಕ ಯುಗದಲ್ಲಿನ ತಾಂತ್ರಿಕತೆಯ ಹಿಂದೆ ಬಿದ್ದಿರುವ ವಿದ್ಯಾರ್ಥಿ ಸಮುದಾಯವನ್ನು ವಾಸ್ತವ ಜಗತ್ತಿಗೆ ಕರೆತರಲು ಆಪ್ತ ಸಮಾಲೋಚನೆ ಅಗತ್ಯವಾಗಿದೆ. ಹದಿಹರೆಯದ ಮಕ್ಕಳೊಂದಿಗೆ ಹೇಗೆ ವ್ಯವಹರಿಸಬೇಕು.ಅವರಲ್ಲಿ ವಿಷಯ ಜ್ಞಾನವನ್ನು ಹೇಗೆ ತುಂಬಬೇಕೆಂಬ ಬಗ್ಗೆ ಉಪನ್ಯಾಸಕರಿಗೆ ಮಾಹಿತಿ ಇರಬೇಕು. ಈ ಬಗ್ಗೆ ಉಪನ್ಯಾಸಕರಿಗೆ ಪುನಶ್ಚೇತನ ತರಬೇತಿ ನೀಡುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.


ಕಾರ್ಯಾಗಾರ ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಉಪನ್ಯಾಸಕರ ಪಾತ್ರ ಹಿರಿದಾದುದು. ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮತ್ತು ಫಲಿತಾಂಶ ಸುಧಾರಣೆಯತ್ತ ಗಮನ ಹರಿಸಬೇಕು. ಆಗಬೇಕಾದ ಕೆಲಸಗಳ ಬಗ್ಗೆ ಉಪನ್ಯಾಸಕರ ಸಂಘಟನೆಗಳು ಮುಕ್ತವಾಗಿ ಹೇಳಬೇಕು ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನಿರ್ದೇಶಕ ಬಿ.ಕೃಷ್ಣಪ್ಪ, ಹೊಳೆಹೊನ್ನೂರು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಳನಿವೇಲು, ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಯೋಗೇಶ್‌, ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ.ಕೆ, ಜಿಲ್ಲಾ ಸಮಾಜ ಶಾಸ್ತ್ರ ವೇದಿಕೆ ಗೌರವ ಅಧ್ಯಕ್ಷ ಪ್ರಕಾಶ್‌ ಕೆ.ಸಿ ಭಾಗವಹಿಸಿದ್ದರು. ಜಿಲ್ಲಾ ಸಮಾಜ ಶಾಸ್ತ್ರ ವೇದಿಕೆ ಅಧ್ಯಕ್ಷ ಎಸ್.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು ಪ್ರಾಚಾರ್ಯರುಗಳಾದ ಜಿ.ಎಫ್‌, ಕುಟ್ರಿ, ಲೇಖನ್‌ ಡಿ,  ಪದವಿಪೂರ್ವ ಉಪಾನ್ಯಾಸಕರ ಸಂಘದ ಜಿಲ್ಲಾ ಪ್ರಧಾನ

ಕಾರ್ಯದರ್ಶಿ ರಾಜಶೇಖರ್‌ ಕೆ, ಸಮಾಜ ಶಾಸ್ತ್ರ ವೇದಿಕೆ ಕಾರ್ಯದರ್ಶಿ ನರಸಿಂಹಪ್ಪ ಟಿ,  ಖಜಾಂಚಿ ನಾಗರಾಜ್‌ ಟಿ.ಆರ್‌  ಉಪಸ್ಥಿತರಿದ್ದರು.
ನಿವೃತ್ತ  ಉಪನ್ಯಾಸಕರ ಸನ್ಮಾನ ಕಾರ್ಯಕ್ರಮವನ್ನು

ಸಿ.ಎಂ.ಚಂದ್ರಮೋಹನ್ ನಡೆಸಿಕೊಟ್ಟರು. ಈ ಸಂದರ್ಭ ಸಮಾಜ ಶಾಸ್ತ್ರ ವಿಷಯದಲ್ಲಿ ೧೦೦ ಅಂಕ ಪಡೆದ  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉಪನ್ಯಾಸಕಿ ಸುಚೇತನ ಸ್ವಾಗತಿಸಿದರು. ಜಿ.ಎಫ್.ಕುಟ್ರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಂಜಲಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಮತ್ತು ಕೀರ್ತನಾ ನಿರೂಪಿಸಿದರು. ನರಸಿಂಹಪ್ಪ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!