ಶಿವಮೊಗ್ಗ,ಜು.25: ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ರೇಡಿಯೋ ಶಿವಮೊಗ್ಗ ದಾಖಲೆಯ 12 ಗಂಟೆಗಳ ನಿರಂತರ ನೇರಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್ ನ್ನು ಯಶಸ್ವಿಯಾಗಿ ನಡೆಸಿತು.
ಸಾಂದೀಪನಿ ಶಾಲೆಯ ಶಿಕ್ಷಕ/ ಗ್ರಂಥಪಾಲಕ, ರಂಗಕರ್ಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಲ್ನಾಡ್ ಓಪನ್ ಗ್ರೂಪ್ ನ ಸ್ಕೌಟ್ ಮಾಸ್ಟರ್ ಚೇತನ್ ಸಿ. ರಾಯನಹಳ್ಳಿ ಹಾಗೂ ರಂಗಕರ್ಮಿ, ರೇಡಿಯೋ ಶಿವಮೊಗ್ಗದ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ಈ ಕಾರ್ಯಕ್ರಮ ನಡೆಸಿಕೊಟ್ಟರು.


ಬೆಳಗ್ಗೆ 8 ಗಂಟೆಗೆ ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಯುದ್ಧದ ಇತಿಹಾಸ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಪುರಾಣಗಳಲ್ಲಿ ಯುದ್ಧದ ಪರಿಕಲ್ಪನೆ, ಮನುಷ್ಯ ಸಂಕುಲದಲ್ಲಿ ಯುದ್ಧ ಬೆಳೆದು ಬಂದ ಬಗೆ, ಕಾಶ್ಮೀರದ ಇತಿಹಾಸ, ವಿಶ್ವ ಮಹಾಯುದ್ಧಗಳು, ಭಾರತೀಯ ಸೇನೆ ಇತರೆ ದೇಶಗಳಿಗೆ ನೀಡಿದ ನೆರವು, ಕಾರ್ಗಿಲ್ ಯುದ್ಧ, ಯುದ್ಧ ನೀತಿಗಳು, ವೀರಯೋಧರ ಕುರಿತಾಗಿ ಮಾತುಗಳು, ಇದರ ಜೊತೆಗೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ವೀರ ಯೋಧರೊಂದಿಗೆ ಸಂವಾದವಿತ್ತು. ರಾತ್ರಿ 8 ಗಂಟೆಗೆ ರಾಷ್ಟ್ರಗೀತೆಯೊಂದಿಗೆ ಸಂಪನ್ನವಾಯಿತು.


ಕಾರ್ಯಕ್ರಮದ ನಡುವೆ ದೇಶಭಕ್ತಿ ಗೀತೆಗಳು ಬಿತ್ತರಗೊಂಡವು . ನೇರಪ್ರಸಾರದಲ್ಲಿ ಕೇಳುಗರಿಗೂ ಭಾಗವಹಿಸಲು ಅವಕಾಶವಿತ್ತು. ವಿಶ್ರಾಂತ ಸೈನಿಕರು, ಕರ್ತವ್ಯ ನಿರತ ಸೈನಿಕರು ದೇಶದ ವಿವಿಧೆಡೆಯಿಂದ ಕರೆ ಮಾಡಿ ಮಾತನಾಡಿದ್ದು ವಿಶೇಷವಾಗಿತ್ತು.

ಕೇಳುಗರು ನವದೆಹಲಿ, ಬೆಳಗಾವಿ, ಗಂಗಾವತಿ ಹೀಗೆ ದೇಶದ ವಿವಿಧೆಡೆಗಳಿಂದ ಕರೆ ಮಾಡಿ ಮಾತನಾಡಿದರು. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಅನೇಕ ಕೇಳುಗರು, ಕಾರ್ಯಕ್ರಮ ಆಲಿಸುತ್ತಾ ಜೊತೆಯಾದರು. ಕಾರ್ಯಕ್ರಮದ ನಡುವೆ ಕೇಳುಗರಿಗೆ ಪ್ರಶ್ನೆಗಳೂ ಇದ್ದಿದ್ದರಿಂದ, ಎಲ್ಲರೂ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಯಿತು.
ಕಾರ್ಗಿಲ್ ಹುತಾತ್ಮ ವಿಕ್ರಮ್ ಬಾತ್ರಾ ರಣಭೂಮಿಯಲ್ಲಿ ನೀಡಿದ ಉದ್ಘೋಷ ಯೇ ದಿಲ್ ಮಾಂಗೇ ಮೋರ್. ಇದು ಆನಂತರ ಬಹಳ ಜನಪ್ರಿಯ ಘೋಷಣೆ ಆಯಿತು.

ಇದನ್ನು ಶೀರ್ಷಿಕೆಯನ್ನಾಗಿಸಿ, ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ (ಕಿಡ್ಸ್) ಹಾಗೂ ರೇಡಿಯೋ ಶಿವಮೊಗ್ಗ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್ ರೂಪಿಸಿತ್ತು. ಇದನ್ನು ಆಲಿಸಿ, ಭಾಗವಹಿಸಿದ ಎಲ್ಲರಿಗೂ ರೇಡಿಯೋ ಶಿವಮೊಗ್ಗ90.8 ಎಫ್ ಎಂನ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಧನ್ಯವಾದ ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!