ಶಿವಮೊಗ್ಗ,ಜೂ.15
     ಜೂನ್ 21 ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಂಡಿದ್ದು, ಯೋಗ ದಿನದ ಯಶಸ್ವಿ ಆಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


       ಜೂನ್ 15 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೂ.21 ಕ್ಕೆ ‘ಯೋಗ ಫಾರ್ ಸೆಲ್ಫ್ ಆಂಡ್ ಸೊಸೈಟಿ’,ಘೋಷವಾಕ್ಯದಡಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳ್ಳಿಗೆ 6.30 ಕ್ಕೆ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಮತ್ತು ಅಧಿಕಾರಿಗಳು ಸೇರಿದಂತೆ 500 ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವರು.  


  ಜೂನ್ 21 ರ ಬೆಳಿಗ್ಗೆ 6.30 ಕ್ಕೆ ಎಲ್ಲರೂ ಒಂದೆಡೆ ಸೇರಿ, ಬೆಳಿಗ್ಗೆ 6.45 ರಿಂದ 7 ಗಂಟೆವರೆಗೆ ಯೋಗ ಗೀತೆ, ಬೆಳಿಗ್ಗೆ 7 ರಿಂದ 7.45 ರವರೆಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಯೋಗ ಪ್ರದರ್ಶನ, ಬೆಳಿಗ್ಗೆ 8 ರಿಂದ 8.30 ರವರೆಗೆ ವೇದಿಕೆ ಕಾರ್ಯಕ್ರಮ. 8.30 ರಿಂದ 9.45 ರವರೆಗೆ ಉಪನ್ಯಾಸ ಮತ್ತು 9.20 ಕ್ಕೆ ಉಪಹಾರ ವ್ಯವಸ್ಥೆ ಇರುತ್ತದೆ.


    ಪೊಲೀಸ್ ಇಲಾಖೆಯವರು ಕಾರ್ಯಕ್ರಮ ನಡೆಯುವ ಸ್ಥಳದ ಭದ್ರತೆ , ವಾಹನ ದಟ್ಟಣೆ ನಿರ್ವಹಣೆ, ಹಾಗೂ ಮಹಾನಗರಪಾಲಿಕೆ ವತಿಯಿಂದ ಕುಡಿಯುವ ನೀರು ಸ್ವಚ್ಚತಾ ವ್ಯವಸ್ಥೆ ಮತ್ತು ಮಾಹಿತಿ ಫಲಕ ಹಾಕಲು ಸಹಕರಿಸಬೇಕು. ಆಯುರ್ವೇದ ಮಹಾವಿದ್ಯಾಲಯ ಹಾಗೂ ಡಿಡಿಪಿಯು ಅವರು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು. ಹಾಗೂ ಯೋಗ ದಿನಾಚರಣೆಗೆ ಅಗತ್ಯವಾದ ಇತರೆ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


     ಜಿಲ್ಲಾ ಆಯುಷ್ ಅಧಿಕಾರಿಯಾದ ಡಾ. ಲಿಂಗರಾಜ ಎಸ್ ಹಿಂಡಸಗಟ್ಟಿ ಮಾತನಾಡಿ, ಜೂ 10 ರಿಂದ 20 ವರೆಗೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಯೋಗ ಅಭ್ಯಾಸ ಆಯೋಜಿಸಲಾಗುತ್ತಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿ ಏಕಕಾಲದಲ್ಲಿ

ಯೋಗಾಭ್ಯಾಸ ಮತ್ತು ಆಯುಷ್ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಪಿಸಿಓಡಿ ಮತ್ತು ಥೈರಾಡ್ ನಿರ್ವಹಣೆ ಕುರಿತು ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಪರಿಕಲ್ಪನೆಯಡಿ ಮಹಿಳೆಯರಿಗೆ ಯೋಗಾಭ್ಯಾಸ ನಡೆಸಲಾಗಿದೆ ಎಂದು ಮಾಹಿತಿ ಒದಗಿಸಿದರು.


     ಸಭೆಯಲ್ಲಿ ಡಿ.ಹೆಚ್.ಒ ಡಾ.ನಟರಾಜ್, ಡಿಡಿಪಿಯು ಕೃಷ್ಣಪ್ಪ, ಪೋಲಿಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು,  ಸಿಬ್ಬಂದಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!