ಶಿವಮೊಗ್ಗ,ಮೇ.21:
ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಅವಾಂತರಗಳು ಅರ್ಧಗಂಟೆ ಮಳೆ ಬಿದ್ದರೆ ಬೆತ್ತಲಾಗುವುದು ಖಚಿತ.
ಏಕೆಂದರೆ ಈಗಾಗಲೇ ಎರಡು ಬಾರಿ ಬಿದ್ದ ಅಲ್ಪ ಸ್ವಲ್ಪ ಮಳೆಗೆ ಇಡೀ ಶಿವಮೊಗ್ಗ ನಗರ ಬೆದರಿದೆ.
ಕನಿಷ್ಠ ಜ್ಞಾನ ಇಲ್ಲದ ಇಂಜಿನಿಯರ್ ಮಹಾಶಯರುಗಳು ಮಳೆ ಬಿದ್ದ ನೀರನ್ನು ಹರಿದು ಮುಂದೆ ಹೋಗಲು ಹಳ್ಳ ಕೊಳ್ಳ ಸೇರಲು ಅವಕಾಶವನ್ನೇ ಮಾಡಿಕೊಡದೆ ನೀರು ರಸ್ತೆಯ ತುಂಬೆಲ್ಲ ನರ್ತಿಸುವಂತೆ ಮಾಡಿದ್ದಾರೆ.
ಶಿವಮೊಗ್ಗ ಗಾರ್ಡನ್ ಏರಿಯಾದಲ್ಲಿ ಸುರಿದ ವರುಣನಿಗೆ “SMART CITY” ಮಾಡಿದ ಅವಾಂತರ ವೀಡಿಯೋ ನೋಡಿ
- ತುಂಗಾತರಂಗ ದಿನಪತ್ರಿಕೆ
ಸಾಕಷ್ಟು ಕಡೆ ಮನೆಗಳ ಒಳಗೆ ಈಗಾಗಲೇ ಪ್ರವೇಶಿಸಿದ್ದು ಜನ ಬದುಕುವುದು ಕಷ್ಟ ಎಂದು ಶಪಿಸುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಶಿವಮೊಗ್ಗ ನಗರದ ಜೈಲು ರಸ್ತೆಯ ಕರ್ಮ ಕಥೆಯನ್ನು ಇಲ್ಲಿ ನೋಡಿ.
ಇದು ಶಿವಮೊಗ್ಗ ಜೈಲ್ ರೋಡ್ ಕಣ್ರಿ…! ವೀಡಿಯೋ ನೋಡ್ರಿ
ತುಂಗಾತರಂಗ ದಿನಪತ್ರಿಕೆ
ದೈವಜ್ಞ ಸರ್ಕಲ್ ಮಾರ್ಗದಲ್ಲಿ ಇರುವ ಮೇಲಿನ ಜಾಗದಿಂದ ಬರುವ ನೀರು ಸುಬ್ಬಯ್ಯ ಆಸ್ಪತ್ರೆ ಮುಂದೆ ಕಟ್ಟಿಕೊಳ್ಳುತ್ತದೆ ಆಸ್ಪತ್ರೆ ದಾಟಿದ ನಂತರ ಲಕ್ಷ್ಮಿ ಚಿತ್ರಮಂದಿರದ ಪಕ್ಕದ ಚಾನೆಲ್ ಸಿಗುವುದರೊಳಗೆ ಅವಾಂತರ ಸೃಷ್ಟಿಸಿದೆ.
ಸುಮಾರು ಒಂದು ಅಡಿಯಷ್ಟು ನೀರು ನಿನ್ನೆ ಸಂಜೆ ನಿಂತುಕೊಂಡದ್ದು ಸ್ಮಾರ್ಟ್ ಸಿಟಿ ಅವಾಂತರದ ಸಾಕ್ಷಿಗೆ ಒಂದು ಘಟನೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕೇವಲ 20 ನಿಮಿಷ ಮಳೆ ಅವಧಿಯಲ್ಲಿ ಇಡೀ ಹೊಸಮನೆ ಆ ಭಾಗದ ಮನೆಗಳ ಒಳಗೆಲ್ಲ ನೀರು ನುಗ್ಗಿದೆ. ಕನಿಷ್ಠ ಒಂದು ಗಂಟೆ ಏನಾದರೂ ಮಳೆ ಬಂದಿದ್ದರೆ ಆಗಿನ ಸನ್ನಿವೇಶವು ಅಪ್ಪಟ ರಾಕ್ಷಸನಿಗೂ ಇಷ್ಟವಾಗಲಿಕ್ಕಿಲ್ಲ.
ಅಂತೆಯೇ ಶಿವಮೊಗ್ಗ ಬಾಪೂಜಿನಗರ, ಲಷ್ಕರ್ ಮೊಹಲ್ಲಾದಲ್ಲೂ ಇಂತಹ ಅವಾಂತರಗಳು ಸಾಕಷ್ಟಿವೆ.
ಅಲ್ಲಿ ನೀರು ಹರಿದು ಮುಂದೆ ಹೋಗಲು ಅವಕಾಶವಿಲ್ಲದೆ ಇರುವುದರಿಂದ ಮನೆಯ ಒಳಗೆ ನೀರು ನುಗ್ಗುತ್ತಿದೆ. ಮನೆಯೊಳಗೆ ಇಟ್ಟುಕೊಂಡಿದ್ದ ಪಾತ್ರೆ ಪಗಡೆ, ದವಸಗಳು ನೀರು ಪಾಲಾಗಿವೆ. ಹಾಗೆ ಹೊಸ ಬಡಾವಣೆ ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಬಡಾವಣೆಯ ಪಶು ವೈದ್ಯಕೀಯ ಕಾಲೇಜಿನ ಬಳಿ ನಿನ್ನೆ ಹಾಗೂ ಮೊನ್ನೆ ಸುರಿದ ಕೇವಲ 20 ರಿಂದ 30 ನಿಮಿಷದ ಸ್ವಲ್ಪ ಮಳೆಗೆ ತನ್ನ ಅವಾಂತರವನ್ನು ತೋರಿಸಿದೆ.
ರಸ್ತೆಯಲ್ಲಿ ನೀರು ಹರಿಯುತ್ತಿದೆ, ಚರಂಡಿಯ ಒಳಗೆ ನೀರು ಹೋಗುವ ಯಾವುದೇ ಅವಕಾಶಗಳಿಲ್ಲ. ರಸ್ತೆಗೂ ಹಾಗೂ ಚರಂಡಿಗೂ ಮಧ್ಯ ಒಂದು ಚಿಕ್ಕ ಅಂತರವನ್ನು ಇಡಬೇಕೆಂಬ ಸಣ್ಣ ಕಳಕಳಿ ಹಾಗೂ ಕಾಳಜಿ ಇಲ್ಲದ ಸ್ಮಾರ್ಟ್ ಸಿಟಿ ವ್ಯವಸ್ಥೆ ಇಡೀ ಶಿವಮೊಗ್ಗ ನಗರದಲ್ಲಿ ಈಗ ಗತಿಗೆಟ್ಟ ವ್ಯವಸ್ಥೆಯನ್ನು ಬಿತ್ತರಿಸುತ್ತದೆ.
ಕನಿಷ್ಠ 2ರಿಂದ 3 ಗಂಟೆಗಳ ಕಾಲ ಮಳೆ ಸುರಿದರೆ ನಗರದ ಎಲ್ಲ ಭಾಗಗಳು ನೀರಿನಿಂದ ಅವಾಂತರವಾಗಬಹುದೇ? ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗುತ್ತದೆ.
ಕೂಡಲೇ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಇತ್ತ ಗಮನಿಸಿ ಕನಿಷ್ಠ ಮಳೆಯ ನೀರನ್ನು ಸಲೀಸಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಿದೆ.
ಸಾವಿರಾರು ಕೋಟಿ ಹಣ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಯಾರ ಉದ್ಧಾರ ಮಾಡಿದ್ದೂ ಭಗವಂತನಿಗೆ ಗೊತ್ತು.