ಸೊರಬ: ನಾಗರೀಕರು ವಾಸದ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹ ವಾಗದಂತೆ ಸದಾ ಎಚ್ಚರಿಕೆ ವಹಿಸುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್ ಪಾಟೀಲ್ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ, ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ವತಿಯಿಂದ ರಾಷ್ಟೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಗ್ಯೂ ಹರಡುವುದನ್ನು ತಡೆಯಲು ಸರ್ಕಾರ ಡೆಂಗ್ಯೂ ದಿನವನ್ನು ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಡೆಂಗ್ಯೂ ಮತ್ತು ಅದರ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ಜೊತೆಗೆ ನೆರವಾಗುತ್ತದೆ. ಜನತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಉಪಯೋಗಿಸದ ತೊಟ್ಟಿ, ಮಡಿಕೆ ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರ ಮಾತನಾಡಿ, ಪುರಸಭೆಯಿಂದ ನಿತ್ಯ ಈಗಾಗಲೇ ಕಸಸಂಗ್ರಹಣಾ ವಾಹನದ ಮೂಲಕ ಡೆಂಗ್ಯೂ ಕುರಿತು ಜಾಗೃತಿಯ ಧ್ವನಿ ಮುದ್ರಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ. ಪಟ್ಟಣದ ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಜನತೆ ಸಂಗ್ರಹಿಸಿಕೊಂಡ
ನೀರನ್ನು ಕನಿಷ್ಟ ವಾರಕ್ಕೆ ಒಮ್ಮೆಯಾದರು ಬದಲಿಸಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಹಾಗೂ ಸೂಕ್ತ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ನಂತರ ಪಟ್ಟಣದ ಮುಖ್ಯರಸ್ತೆ, ಚಾಮರಾಜಪೇಟೆ, ಚಿಕ್ಕಪೇಟೆ, ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆ, ಸಾಗರ ರಸ್ತೆ ಸೇರಿದಂತೆ ವಿವಿಧಡೆ ಜಾಗೃತಿ ಜಾಥಾ ನಡೆಸಲಾಯಿತು. ಜನತೆಗೆ ಡೆಂಗ್ಯೂ ಕುರಿತು ಜಾಗೃತಿ ಕರಪತ್ರವನ್ನು ಹಂಚಲಾಯಿತು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ತಾಲೂಕು ಹಿರಿಯ ಆರೋಗ್ಯಾಧಿಕಾರಿ ಯಶವಂತ ರಾಜ್, ಹಿರಿಯ ಮಹಿಳಾ ಆರೋಗ್ಯಾಧಿಕಾರಿ ಗಾಯತ್ರಿ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಣಜಿತ್ ಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.