ಸಾಗರ, ಮೇ.೧೭:
ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.


ಇಲ್ಲಿನ ಗಾಂಧಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಕರೆಯಲಾಗಿದ್ದ ಪಕ್ಷದ ಪ್ರಮುಖರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಮೇಲ್ಮನೆ ಚುನಾವಣೆ ಕಾಂಗ್ರೇಸ್‌ಗೆ ಅತ್ಯಂತ ಪ್ರತಿಷ್ಟೆಯಾಗಿದೆ. ಮೇಲ್ಮನೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುಮತದ ಕೊರತೆ ಇದೆ. ವಿಧಾನಸಭೆಯಲ್ಲಿ ಕೆಲವು ಬಿಲ್ ಪಾಸಾದರೂ ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದೆ ಇರುವುದರಿಂದ ಅನೇಕ ಕಾನೂನು ಜಾರಿಗೆ ಬರಲು ತೊಡಕಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನ ಎಲ್ಲಾ ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಗಳ ನೇತೃತ್ವದ ನಡೆದ ಸಭೆಯಲ್ಲಿ ದೃಢನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ಪ್ರಮುಖರು ವಿಶ್ವಮಿಸದೆ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರವನ್ನು ಗೆಲ್ಲಲು ಅಹೋರಾತ್ರಿ ಪ್ರಚಾರ ಕಾರ್ಯ ಕೈಗೊಳ್ಳು ವಂತೆ ಕರೆ ನೀಡಿದರು.


ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಅರ್ಹ ಅಭ್ಯರ್ಥಿಯಾಗಿದ್ದು ಅವರ ಗೆಲುವಿಗೆ ಪೂರಕ ವಾತಾವರಣ ಇದೆ. ಕಾರ್ಮಿಕ ಕ್ಷೇತ್ರದಿಂದ ಬಂದಿರುವ ಮಂಜುನಾಥ್‌ಗೆ ಅತಿಹೆಚ್ಚು ಪದವೀಧರರ ಬೆಂಬಲ ಇದೆ. ಶಿಕ್ಷಕರ ಕ್ಷೇತ್ರದಿಂದ ಕೊಡಗಿನಿಂದ ಶಿಕ್ಷಕ ವೃತ್ತಿ ನಿರ್ವಹಿಸಿರುವ ಮಂಜುನಾಥ್ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ವಿಧಾನ ಪರಿಷತ್ ಚುನಾವಣೆ ವಿಭಿನ್ನವಾಗಿದ್ದು ಈ ಕ್ಷೇತ್ರಕ್ಕೆ ಮತ ಹಾಕುವವರನ್ನು ಹುಡುಕಿ ಅವರ ಮನವೊಲಿಸಿ, ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನವಿ ಮಾಡಬೇಕು

. ಎರಡೂ ಕ್ಷೇತ್ರದಲ್ಲೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವ ನಿಟ್ಟಿನಲ್ಲಿ ಸಾಗರ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ಕೊಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೇಸ್ ಪಕ್ಷ ಗೆಲ್ಲಬೇಕು. ನಮ್ಮ ಕ್ಷೇತ್ರದಲ್ಲಿ ಕಾಗೋಡು

ತಿಮ್ಮಪ್ಪನವರು ಮಾಡಿರುವ ಕೆಲಸ ನಮಗೆ ಮತ ಕೇಳಲು ಸಹಕಾರಿಯಾಗಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಶಾಸಕರಾದ ಮೇಲೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಬಗ್ಗೆಅನುಭವ ಇರುವ ಅಭ್ಯರ್ಥಿಗಳನ್ನು ಕಾಂಗ್ರೇಸ್ ಪಕ್ಷ ಕಣಕ್ಕೆ ಇಳಿಸಿದೆ. ಅವರಿಗೆ ಹೆಚ್ಚು ಮತ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.


ಗ್ರಾಮಾಂತರ ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಉಷಾ ಎನ್., ಮಧುಮಾಲತಿ, ರವಿಕುಮಾರ್, ಸುರೇಶಬಾಬು, ಮಕ್ಬೂಲ್ ಅಹ್ಮದ್, ಕೆ.ಹೊಳೆಯಪ್ಪ, ತಸ್ರೀಫ್, ಎನ್.ಲಲಿತಮ್ಮ, ಮೈಕಲ್ ಡಿಸೋಜ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!