ಸಾಗರ(ಶಿವಮೊಗ್ಗ),ಮೇ.೧೩: ತಾಲ್ಲೂಕಿನ ಕಾರ್ಗಲ್-ಜೋಗ ಪಟ್ಟಣಪಂಚಾಯಿತಿ ವ್ಯಾಪ್ತಿ ಜೋಗದ ಟಿ.ಎಂ.ಶೆಡ್ ಬಡಾವಣೆಯಲ್ಲಿ ವಾಸವಿರುವ ದೇವಿಕ ಎಂಬುವರ ಮನೆಗೆ ಶನಿವಾರ ರಾತ್ರಿ ಸುಮಾರು ೨ ಗಂಟೆ ಸಮಯದಲ್ಲಿ ಬೆಂಕಿ ತಗುಲಿ ಭಾಗಶಃ ಮನೆ ಸುಟ್ಟು ಭಸ್ಮವಾಗಿರುವ ಘಟನೆ ವರದಿಯಾಗಿದೆ.


ಸುಮಾರು ೮ ರಿಂದ ೧೦ ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಮಧ್ಯರಾತ್ರಿ ಸುಮಾರು ೨ ಗಂಟೆ ಹೊತ್ತಿಗೆ ಬೆಂಕಿ ತಗುಲಿದ್ದು ಪಕ್ಕದ ಮನೆಯವರಿಗೆ ಗೊತ್ತಾಗಿ ತಕ್ಷಣ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಹಾಗೂ ಅಷ್ಟರಲ್ಲಿ ಪಕ್ಕ ಅಕ್ಕ ಪಕ್ಕದ ನಿವಾಸಿಗಳು ಎದ್ದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಮನೆಯ ಒಳಗಡೆ ಅಡುಗೆಮನೆಯಲ್ಲಿ ಎರಡು ತುಂಬಿದ ಅನಿಲದ ಸಿಲಿಂಡರ್ ಗಳಿದ್ದು ಅವುಗಳಿಗೆ ಏನಾದರೂ ಬೆಂಕಿ ತಗಲಿದ್ದರೆ ಸ್ಪೋಟವಾಗುವ ಸಾಧ್ಯತೆ ಇದ್ದು ಇನ್ನೂ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.


ಅಗ್ನಿ ಅನಾಹುತದಿಂದ ವಾಸಿಸುವ ಮನೆ ಕಳೆದುಕೊಂಡಿರುವ ಸಂತ್ರಸ್ಥೆ ದೇವಿಕಾ ಅವರಿಗೆ ತನ್ನ ಮನೆಗೆ ತಗುಲಿರುವುದು ಆಕಶ್ಮಿಕ ಬೆಂಕಿಯಲ್ಲ ಎಂಬ ಸುಳಿವು ದೊರೆಯುತ್ತಿದ್ದಂತೆ ಭಾನುವಾರ ಮದ್ಯಾಹ್ನ ೧ ಗಂಟೆಗೆ ಜೋಗಾ ಪೊಲೀಸ್ ಠಾಣೆಗೆ ದಾವಿಸಿ ತನ್ನ ಮನೆಗೆ ಬೆಂಕಿ ಇಟ್ಟವರ ಹೆಸರುಗಳನ್ನು ಉಲ್ಲೇಖಿಸಿ ದೂರು ನೀಡಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾರೆ.


ಸಂತ್ರಸ್ಥೆ ನೀಡಿದ ದೂರನ್ನು ಸ್ವೀಕರಿಸುವಲ್ಲಿ ಜೋಗಾ ಸಬ್‌ಇನ್ಸ್‌ಪೆಕ್ಟರ್ ನಿರ್ಲಕ್ಷ್ಯವಹಿಸಿದ್ದಲ್ಲದೇ ದೂರು ಸ್ವೀಕರಿಸಲಿಲ್ಲ.ಪ್ರಕರಣವನ್ನು ದಾಖಲಿಸದೇ ಕಾನೂನು ಕ್ರಮವಹಿಸುವ ಬದಲಿಗೆ ಸಂತ್ರಸ್ಥೆಯನ್ನು ಪೊಲೀಸ್ ಠಾಣೆಯಲ್ಲಿ ಮಧ್ಯಾಹ್ನ ೧ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ಕೂರಿಸಿಕೊಂಡಿದ್ದರು ಎಂದು ಸಂತ್ರಸ್ಥೆ ದೇವಿಕಾ ಅಳಲು ತೋಡಿಕೊಂಡಿದ್ದಾರೆ.


ಘಟನಾ ಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್ ಭೇಟಿ ನೀಡಿ ಮನೆಕಳೆದುಕೊಂಡಿರುವ ಸಂತ್ರಸ್ಥೆ ದೇವಿಕಾ ಅವರಿಗೆ ಸಾಂತ್ವಾನ ಹೇಳಿದರು.ಮನೆಗೆ ಬೆಂಕಿ ಅವಘಡದಿಂದ ಆಗಿರುವ ಅನಾಹುತವನ್ನು ಪರಿಶೀಲಿಸಿದರು.


ಈ ಸಂದರ್ಭದಲ್ಲಿ ಜೋಗಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಫುಲ್ಲಾಮಧುಕರ್ ಅವರು ಮಹಿಳಾ ಸಂತ್ರಸ್ಥೆಗೆ ತಕ್ಷಣ ರಕ್ಷಣೆ ನೀಡುವ ಬದಲಿಗೆ ಮಹಿಳೆ ನೀಡಿರುವ ದೂರನ್ನು ಸ್ವೀಕರಿಸದೇ ದಿವ್ಯ ನಿರ್ಲಕ್ಷಿಸಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಒಂಟಿಯಾಗಿ ವಾಸಿಸುತ್ತಿರುವ ಅಸಹಾಯಕ ಮಹಿಳೆಯ ಮೇಲೆ ಯಾರೋ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆದಿದ್ದಾರೆ.ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸತ್ರಂಸ್ತ ಮಹಿಳೆಗೆ ಸರಕಾರ ಪರಿಹಾರ ನೀಡಬೇಕೆಂದು ಪ್ರಫುಲ್ಲ ಮಧುಕರ್ ಒತ್ತಾಯಿಸಿದರು.


ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲ ಮಧುಕರ್ ಅವರ ಮಾತಿಗೆ ಎದುರು ಉತ್ತರ ನೀಡಿದ ಜೋಗಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ ಕೂರಿಸಿ ವಿಚಾರಿಸಲು ಕಾನೂನಿನಲ್ಲಿ ಅವಕಾಶವಿಲ್ಲ.ನೀವು ಹೇಳಿದಂತೆ ಮಾಡಲು ಆಗುವುದಿಲ್ಲ ಎಂದು ಉಡಾಪೆಯಿಂದ ಪ್ರತಿಕ್ರಿಯಿಸಿದ್ದಾರೆ.


ಪ್ರಫುಲ್ಲಾಮಧುಕರ್ ಅವರು ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರದ ದೌರ್ಜನ್ಯ ತಡೆ ಸಮಿತಿ ಸದಸ್ಯರಾಗಿ ಮಹಿಳೆಯರ ಪರವಾಗಿ ರಾಜ್ಯದ ಎಲ್ಲಾ ಜಿಲ್ಲಾ ವ್ಯಾಪ್ತಿಯಲ್ಲಿ ಸಮಿತಿ ಅಧ್ಯಕ್ಷರಾಗಿದ್ದ ಉಗ್ರಪ್ಪನವರ ನೇತೃತ್ವದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ರಾಜ್ಯದಲ್ಲಿ ದೌರ್ಜನ್ಯದ ಪ್ರಕರಣಗಳ ಕುರಿತು ಕಠಿಣ ಕಾನೂನು ಕ್ರಮದ ಜೊತೆಗೆ ಸಂತ್ರಸ್ತೆಯರುಗಳಿಗೆ ಸೂಕ್ತ ಗೌರವ ಮತ್ತು ಪರಿಹಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದವರು.
ಈ ಹಿಂದೆ ವಿಧಾನಪರಿಷತ್‌ನಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಮೂಲಕ ರಾಜ್ಯದ ಗಮನಸೆಳೆದವರು.ಜೋಗ ಬೆಂಕಿ ಅವಘಡದ ಪ್ರಕರಣವನ್ನು ಖುದ್ದು ಪರಿಶೀಲಿಸಿದ ಅವರು ಸೋಮವಾರ ಕರ್ನಾಟಕ ರಾಜ್ಯ ಗೃಹಸಚಿವಾಲಯಕ್ಕೆ ಮಾಹಿತಿ ನೀಡಿ ಅಗತ್ಯ ಕ್ರಮವಹಿಸುವಂತೆ ಹೇಳಿದ್ದಾರೆ.
ವಿಷಯದ ಗಂಬೀರತೆಯನ್ನು ಅರಿತ ಗೃಹ ಇಲಾಖೆಯಿಂದ ನೇರವಾಗಿ ಜೋಗಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರಿಗೆ ಸೂಚನೆ ನೀಡಿ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.ಸಂತ್ರಸ್ಥೆ ಮಹಿಳೆಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದ್ದು,ಮನೆ ನಿರ್ಮಿಸಲು ಸಹಕಾರ ನೀಡುವಂತೆ ಸೂಚಿಸಿದ್ದಾರೆ.ನಿರ್ವಹಿಸಿರುವ ಕ್ರಮಗಳ ಸಮಗ್ರ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸುವಂತೆ ಜೋಗಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರಿಗೆ ತಿಳಿಸಿರುವುದು ಸಮಾಧಾನ ತಂದಿದೆ ಎಂದು ಪ್ರಫುಲ್ಲಾಮಧುಕರ್ ಪ್ರತಿಕ್ರಿಯಿಸಿದ್ದಾರೆ.
ಘಟನಾ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸಾಗರ ನಗರಸಭೆ ಸದಸ್ಯೆ ಸರಸ್ವತಿ ನಾಗರಾಜ್ ಮತ್ತು ಕಾರ್ಗಲ್ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶ್ರೀಲತ ,ಸ್ಥಳಿಯ ಕಾಂಗ್ರೆಸ್ ಮುಖಂಡ ಅಂಬಯ್ಯ ಭೇಟಿ ನೀಡಿ ಪರಿಶೀಲಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!