ಶಿವಮೊಗ್ಗ: ಭಾರತ ಹಿಂದು ಧರ್ಮದ ನೆಲೆ ಬೀಡಾಗಿದೆ. ಮನುಷ್ಯ ಧಾರ್ಮಿಕ ನಂಬಿಕೆಯನ್ನು ಮೈಗೂಡಿಸಿಕೊಂಡಲ್ಲಿ ಮಾನಸಿಕ ನೆಮ್ಮದಿ ನೆಲೆಸುತ್ತದೆ. ಹಿರಿಯರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕೃತಿ- ಸಂಸ್ಕಾರ, ಧಾರ್ಮಿಕ ಶ್ರದ್ಧೆ, ನಂಬಿಕೆ ಕಲಿಸಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶ್ರೀ ಮರದ ಚೌಡೇಶ್ವರಿ ಸೇವಾ ಸಮಿತಿ ವತಿಯಿಂದ ೧೪-೦೫-೨೦೨೪ರ ಬೆಳಿಗ್ಗೆ ೯ ಗಂಟೆಗೆ ಇಲ್ಲಿನ ಶರಾವತಿ ನಗರದ ೬೦ ಅಡಿ ಮುಖ್ಯ ರಸ್ತೆಯ ಹಿಂದು ರುದ್ರಭೂಮಿ ಪಕ್ಕದಲ್ಲಿರುವ ಶ್ರೀ ಮರದ ಚೌಡೇಶ್ವರಿ ದೇವಿ ಮತ್ತು ಭೂತಪ್ಪ ಸ್ವಾಮಿಯ ೧೩ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವಸ್ಥಾನಗಳ ಸ್ಥಾಪನೆ, ವಾರ್ಷಿಕೋತ್ಸವದ ಆಚರಣೆ, ದೇಗುಲಗಳ ಜೀರ್ಣೋದ್ಧಾರ, ಗುಡಿ-ಗುಂಡಾರಗಳ ಅಭಿವೃದ್ದಿಯಿಂದ ನಮ್ಮ ಸಂಸ್ಕೃತಿ ಬೆಳೆಯುತ್ತದೆ. ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಯಲ್ಲಿ ಸಂಸ್ಕಾರ ಬೆಳೆಯುತ್ತದೆ. ಮೂಢನಂಬಿಕೆ, ಧಾರ್ಮಿಕ ನಂಬಿಕೆ ಹಾಗೂ ಅಂಧಶ್ರದ್ಧೆಗಳು ಮಾನವ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಇವುಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದರು.

ಧರ್ಮವೆಂದರೆ ಕರ್ತವ್ಯ, ಒಳ್ಳೆಯತನ, ನೈತಿಕತೆ. ಧರ್ಮ ಒಂದು ಬ್ರಹ್ಮಾಂಡ. ಇದು ಸಮಾಜವನ್ನು ಎತ್ತಿ ಹಿಡಿಯುವ ಶಕ್ತಿಯನ್ನು ಸೂಚಿಸುತ್ತದೆ. ಧರ್ಮ-ಶಾಸ್ತ್ರಗಳು ಜಾರಿಗೊಳಿಸಿದ ಅಭ್ಯಾಸವನ್ನು ಸೃಷ್ಟಿಸಲಿಲ್ಲ. ಆದರೆ ಅಸ್ತಿತ್ವದಲ್ಲಿರುವ ಆಚರಣೆಗಳನ್ನು ದಾಖಲಿಸಿವೆ. ಧರ್ಮವು ಸಮಾಜವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಶ್ಲೇಷಿಸಿದರು.

ಧಾರ್ಮಿಕ ನಂಬಿಕೆ ಬೆಳೆಸುವುದರೊಂದಿಗೆ ವೈಚಾರಿಕತೆಯನ್ನೂ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀ ಮರದ ಚೌಡೇಶ್ವರಿ ಸೇವಾ ಸಮಿತಿಯು ಸ್ಮಶಾನದ ಪಕ್ಕದಲ್ಲೇ ದೇಗುಲ ನಿರ್ಮಿಸಿ ವಿಜೃಂಭಣೆಯಿಂದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ದೇವಿಯ ಕೃಪೆಯಿಂದ ಉತ್ತಮ ಮಳೆ-ಬೆಳೆಯಾಗಿ ನಾಡು ಸಮೃದ್ಧಿಯಾಗಲಿ ಎಂದು ಆಶಿಸಿದರು.

ಶ್ರೀ ಮರದ ಚೌಡೇಶ್ವರಿ ಸೇವಾ ಸಮಿತಿ ಗೌರವಾಧ್ಯಕ್ಷ ಶಿವಮೂರ್ತಿ, ಅಧ್ಯಕ್ಷ ವಿ. ನಾಗರಾಜ್, ಉಪಾಧ್ಯಕ್ಷ ವಿಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕುಮಾರ್, ಖಜಾಂಚಿ ಸೋಮಶೇಖರ್, ಉಪ ಕಾರ್ಯದರ್ಶಿ ಎನ್. ಮುನಿಸ್ವಾಮಿ, ಅರ್ಚಕ ಆರ್. ರಾಮು, ಸಮಿತಿಯ ವಿವಿಧ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!