ಶಿವಮೊಗ್ಗ,ಮೇ೯: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಈ ಬಾರಿ ೩ನೇ ಸ್ಥಾನ ಗಳಿಸಿದೆ. ಉಡುಪಿ ಶೇ.೯೪,ದಕ್ಷಿಣ ಕನ್ನಡ ಶೇ.೯೨.೧೨, ಶಿವಮೊಗ್ಗ ಶೇ.೮೮.೬೭ರಷ್ಟು ಫಲಿತಾಂಶ ಪಡೆದು ಮೊದಲ ೩ ಸ್ಥಾನ ಪಡೆದುಕೊಂಡಿವೆ. ಯಾದಗಿರಿ ಶೇ.೫೦.೫೯ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ ಕಳೆದ ಬಾರಿ ೨೮ನೇ ಸ್ಥಾನದಲ್ಲಿತ್ತು. ಈ ಬಾರಿ ೩ನೇ ಸ್ಥಾನಕ್ಕೆ ಜಿಗಿದಿದ್ದು, ಫಲಿತಾಂಶದಲ್ಲಿ ದಾಖಲೆಯಾಗಲಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ೨೩೦೨೮ ವಿದ್ಯಾರ್ಥಿಗಳಲ್ಲಿ ೨೦೪೨೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


ಇಡೀ ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ೩ನೇ ಸ್ಥಾನಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಿಡಿಪಿಐ ಪರಮೇಶ್ವರಪ್ಪ ಸಿ.ಆರ್. ಅವರು ಫಲಿತಾಂಶ ಹೆಚ್ಚಳಕ್ಕಾಗಿ ಅನೇಕ ಕ್ರಮ ಕೈಗೊಳ್ಳಲಾಗಿತ್ತು. ಮೊದಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಡಯಟ್ ಸಹಯೋಗದಲ್ಲಿ ಶೇ.೭೦ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದ ಶಾಲೆಗಳನ್ನು ಗುರುತಿಸಲಾಯಿತು. ವಿದ್ಯಾರ್ಥಿಗಳನ್ನು ೩ ಭಾಗಗಳಾಗಿ ವಿಂಗಡಿಸಿ ಅವರ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಯಿತು ಎಂದರು.


೮ ಶಿಕ್ಷಕರ ತಂಡಗಳು ಪ್ರತಿ ವಿದ್ಯಾರ್ಥಿಯ ಸಮೀಕ್ಷೆ ನಡೆಸಿ ಅವರು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬುವುದನ್ನು ಪರಿಶೀಲಿಸಿದರು. ನಂತರ ಅವರಿಗೆ ಅಗತ್ಯವಾದ ಮಾರ್ಗದರ್ಶನ ನೀಡಲಾಯಿತು ಎಂದು ತಿಳಿಸಿದರು.


ಸುಮಾರು ೯೯ ಶಾಲೆಗಳು ಶೇ.೭೦ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದವು, ಅಂತಹ ಶಾಲೆಗಳಲ್ಲಿ ಕೈಗೊಂಡ ಸುಧಾರಣೆ ಕ್ರಮಗಳಿಂದಾಗಿ ಈ ಬಾರಿ ಹೆಚ್ಚಿನ ಫಲಿತಾಂಶ ಬಂದಿದೆ. ಫಲಿತಾಂಶ ಹೆಚ್ಚಳಕ್ಕಾಗಿ ರಚಿಸಲಾಗಿದ್ದ ಅಧಿಕಾರಿಗಳು, ಶಿಕ್ಷಕರ ತಂಡ ಮಕ್ಕಳ ಕಲಿಕೆಗೆ ಒತ್ತು ನೀಡುವುದರ ಜೊತೆಗೆ ಜನವರಿಯಿಂದಲೇ ಪುನರಾವರ್ತನೆ ಆರಂಭಿಸಿದರು. ಶಾಲಾ ಹಂತ, ತಾಲ್ಲೂಕು ಹಂತ ಜಿಲ್ಲಾ ಮಟ್ಟದಲ್ಲಿಯೂ ಪೂರ್ವಬಾವಿ ಪರೀಕ್ಷೆಗಳನ್ನು ನಡೆಸಲಾಯಿತು. ಇವುಗಳು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದರು.


ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರು ಉತ್ತೀರ್ಣರಾಗಲು ಅವಶ್ಯಕವಾದ ಕಲಿಕೆಯ ಮಾರ್ಗದರ್ಶನ ನೀಡಲಾಯಿತು. ಪಾಸಿಂಗ್ ಪ್ಯಾಕೇಜ್ ರೂಪಿಸಿ ಪ್ರಶ್ನೆ ಪತ್ರಿಕೆಗಳನ್ನು ರಚಿಸಿ ನೀಡಲಾಯಿತು. ಇದು ಕೂಡ ಫಲಿತಾಂಶ ಹೆಚ್ಚಳಕ್ಕೆ ಕಾರಣವಾಯಿತು. ಬಹಳ ಮುಖ್ಯವಾಗಿ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನಿಂದ ಪರೀಕ್ಷೆ ಸಿಸಿಕ್ಯಾಮೆರಾ, ವೆಬ್ ಕ್ಯಾಮ್ ಮೂಲಕವು ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನಿಗಾವಹಿಸಲಾಗಿತ್ತು. ೭೮ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕ್ಯಾಮರಾ ಅಳವಡಿಸಿ ೧೧ ಲ್ಯಾಪ್‌ಟಾಪ್‌ಗಳ ಮೂಲಕ ವೀಕ್ಷಿಸಲಾಯಿತು ಎಂದು ತಿಳಿಸಿದರು.


ಶಿಕ್ಷಣ ಇಲಾಖೆ ಅಧಿಕಾರಿ ಲೋಕೇಶ್ವರಪ್ಪ ಮಾತನಾಡಿ, ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಮೊದಲೇ ಗುರುತಿಸಿ ಅಲ್ಲಿನ ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಯಿತು. ಒಂದು ವರ್ಷದಿಂದ ನಿರಂತರವಾಗಿ ಪಾಠ ಕಲಿಕೆ ಪರೀಕ್ಷೆ ಪುನರ್‌ಮನನ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಫಲಿತಾಂಶ ಬಹುತೇಕ ಸುಧಾರಿಸಿದ್ದು, ಈ ಬಾರಿ ಸರ್ಕಾರಿ ಶಾಲೆಗಳಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ ಎಂದು ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!