ಸಭೆಯಲ್ಲಿ ಶುದ್ದ ಕುಡಿಯುವ ನೀರು, ಅಂಗನವಾಡಿಗಳಿಗೆ ಕೌಂಪೌಂಡ್ ವಿಷಯಗಳ ಚರ್ಚೆ

ಶಿವಮೊಗ್ಗ: ಆಶ್ರಯ ಮನೆ, ಹಾಸ್ಟೆಲ್ ಆರಂಭ, ಬಿಸಿಎಂ ಹಾಸ್ಟೆಲ್‌ಗೆ ಪೀಠೋಪಕರಣ, ಶುದ್ದ ಕುಡಿಯು ನೀರು, ಅಂಗನವಾಡಿಗಳಿಗೆ ಕೌಂಪೌಂಡ್ ಮುಂತಾದ ವಿಷಯಗಳು ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು.
ಇಂದು ಜಿಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಜಿಲ್ಲೆಯಲ್ಲಿ ಹಾಸ್ಟೆಲ್‌ಗಳು ಆರಂಭವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ಸಿದ್ದತೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಎಲ್ಲಾ ಹಂತದ ಹಾಸ್ಟೆಲ್ ಆರಂಭಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದಿದ್ದರೆ ಸರಿಯಾಗುವುದಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಎಸ್‌ಎಸ್‌ಎಲ್‌ಸಿ, ೨ನೇ ಪಿಯುಸಿ, ಅಂತಿಮ ಪದವಿ, ಅಂತಿಮ ಸ್ನಾತಕೋತ್ತರ ಪದವಿ ಹಾಸ್ಟೆಲ್ ಆರಂಭಕ್ಕೆ ಮಾತ್ರ ಸರ್ಕಾರ ಅನುಮೋದನೆ ನೀಡಿದೆ. ೬೫ ಹಾಸ್ಟೆಲ್‌ಗಳಲ್ಲಿನ ೨೩೫೦ ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್‌ಗೆ ಬಂದಿದ್ದಾರೆ. ಕೋವಿಡ್ ನಿಯಮ ಪಾಲನೆ ಕೂಡ ಕಡ್ಡಾಯವಾಗಿದೆ ಎಂದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಬಿಸಿಎಂ ಹಾಸ್ಟೆಲ್‌ಗಳಿಗೆ ಪೀಠೋಪಕರಣ ನೀಡುವುದರ ಜತೆಗೆ ಹಾಸ್ಟೆಲ್ ಕಟ್ಟಡಗಳ ದುರಸ್ತಿ ಕೂಡ ಮಾಡಬೇಕಿದೆ. ಈ ಸಂಬಂಧ ಅಧಿಕಾರಿಗಳಿಂದ ಪ್ರಸ್ತಾವನೆ ಪಡೆದು ತುರ್ತು ಕ್ರಮ ಕೈಗೊಳ್ಳುವಂತೆ ಹೇಳಿದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಅಂಗನವಾಡಿಗಳಿಗೆ ಕಾಂಪೌಂಡ್ ಇಲ್ಲ. ಹೀಗಾಗಿ ಎನ್‌ಆರ್‌ಇಜಿ ಯೋಜನೆ ಅಡಿಯಲ್ಲಿ ಕಂಪೌಂಡ್ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ನಮುಂದಿನ ತ್ರೈ ಮಾಸಿಕ ಸಭೆಯೊಳಗಾಗಿ ಕಾಂಪೌಂಡ್ ಇಲ್ಲದ ೫೪೯ ಅಂಗನವಾಡಿಗಳಿಗೆ ಕಾಂಪೌಂಡ್ ನಿರ್ಮಿಸಲು ಮುಂದಿನ ತ್ರೈಮಾಸಿಕ ಅಭೆಯೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಸಿಇಓ ಎಂ.ಎಲ್.ವೈಶಾಲಿ, ಎಸ್ಪಿ ಶಾಂತರಾಜು ಇದ್ದರು.

ಆಶ್ರಯ ಮನೆ ಮಂಜೂರಾಗಿ ಇದುವರೆಗೂ ಮನೆ ನಿರ್ಮಿಸಿಕೊಳ್ಳದವರ ಪಟ್ಟಿ ಮಾಡಿ ಅಂತಹವರ ಮನೆಗಳನ್ನು ರದ್ದುಪಡಿಸಲು ಕ್ರಮಕೈಗೊಳ್ಳಬೇಕು. ಮನೆ ಮಂಜೂರಾಗಿದ್ದರೂ ನಿರ್ಮಿಸಿಕೊಳ್ಳಲು ಮುಂದೆ ಬಂದಿಲ್ಲದಿದ್ದರೆ ಅವರಿಗೆ ಮನೆಗಳ ಅಗತ್ಯವಿಲ್ಲ ಎಂದರ್ಥ. ಅಂತಹ ಫಲಾನುಭವಿಗಳಿಂದ ಬರೆಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.
ನಗರ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಜಿಪ್ಲಸ್-೨ ಮಾದರಿ ಮನೆಗಳಿಗೆ ಫಲಾನುಭವಿಗಳು ಹಣ ಕಟ್ಟಿ ಕಾಯುತ್ತಿದ್ದರೂ ಇದುವರೆಗೂ ಮನೆ ನೀಡಲು ಸಾಧ್ಯವಾಗಿಲ್ಲ. ಇನ್ನೂ ಕಡತಗಳು ಪ್ರೋಸೆಸ್ ಹಂತದಲ್ಲಿಯೇ ಇದ್ದರೆ ಫಲಾನುಭವಿಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಸಂತೇಕಡೂರು, ಉಂಬ್ಳೇಬೈಲು ಮೊದಲಾದ ಕಡೆಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಬೇಸಿಗೆಯಲ್ಲಿ ಹೊಳೆಗೆ ಮದ್ದು ಹಾಕಿ ಮೀನು ಸತ್ತಿರುವ ಘಟನೆ ಕಳೆದ ವರ್ಷ ನಡೆದಿತ್ತು. ಅಂತಹ ನೀರು ಪೂರೈಕೆಯಾದರೆ ಜನರ ಕಥೆ ಏನೆಂದು ಪ್ರಶ್ನಿಸಿದರಲ್ಲದೇ ಶುದ್ದ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!