ಶಿವಮೊಗ್ಗ,ಮಾ.26: ನಗರದಲ್ಲಿ ಇಂದು ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು. ಯುವಕ ಯುವತಿಯರು ಬಣ್ಣ ಬಳಿದುಕೊಂಡು ಪರಸ್ಪರ ಎರಚಿಕೊಂಡು ಬೈಕುಗಳಲ್ಲಿ ಸವಾರಿ ಮಾಡುತ್ತ ರಂಗು ರಂಗಿನ ಹೋಳಿ ಸಂಭ್ರಮದಲ್ಲಿ ಮಿಂದರು.

ಇಡೀ ಹಬ್ಬವೆಲ್ಲ ಗೋಪಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿತ್ತು ಎಂಬಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರಮುಖವಾಗಿ ಯುವಕ ಯುವತಿಯರೇ ಹೆಚ್ಚಾಗಿ ಡಿ.ಜೆ.ಯೊಂದಿಗೆ ಹೆಜ್ಜೆ ಹಾಕಿ ಬಣ್ಣದ ನೀರುಗಳನ್ನು ಎರಚಿ ನೃತ್ಯಮಾಡುತ್ತ ಬಣ್ಣದಲ್ಲಿ ಮಿಂದು ಹುಚ್ಚೆದ್ದು ಕುಣಿದು ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.

ಗೋಪಿವೃತ್ತದಲ್ಲಿ ಕೇಸರಿ ಅಲಂಕಾರ ಸಮಿತಿವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಡಿ.ಜೆ.ನೃತ್ಯ ಮತ್ತು ದೊಡ್ಡ ಟ್ಯಾಂಕರ್‍ಗಳ ಮೂಲಕ ಕಾರಂಜಿ ನೃತ್ಯವನ್ನು ಕೂಡ ಆಯೋಜಿಸಲಾಗಿತ್ತು. ಬರಗಾಲದ ನೀರಿನ ಕೊರತೆಯ ಹಿನ್ನಲೆಯಲ್ಲಿ ಕಾರಂಜಿ ನೃತ್ಯವನ್ನು ಕಡಿಮೆಗೊಳಿಸಿ ಡಿಜೆಗೆ ಯುವಕ ಯುವತಿಯರು ಹೆಜ್ಜೆ ಹಾಕಿದ್ದು ಕಂಡುಬಂದಿತು.

ಒಬ್ಬರಿಗೊಬ್ಬರು ಬಣ್ಣದ ನೀರನ್ನು ಎರಚುವ ಮೂಲಕ ಕುಣಿದು ಕುಪ್ಪಳಿಸಿದರು.

ಗೋಪಿ ವೃತ್ತದ ಸುತ್ತ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿತ್ತು. ಪೊಲೀಸರು ರಕ್ಷಣಾ ವ್ಯವಸ್ಥೆಯನ್ನು ಕೂಡ ಕೈಗೊಂಡಿದ್ದರು. ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಇದ್ದ ಕಾರಣ ಬಾಲರಾಜ್ ಅರಸ್ ರಸ್ತೆ, ದುರ್ಗಿಗುಡಿ ರಸ್ತೆ, ಬಿ.ಹೆಚ್.ರಸ್ತೆಗಳಲ್ಲಿ ವಾಹನ ಸಂಚಲನವನ್ನು ನಿಬರ್ಂಧಿಸಲಾಗಿತ್ತು. ಹೋಳಿ ಹಬ್ಬವನ್ನು ಕಣ್ಣ್ತುಂಬಿಕೊಳ್ಳಲು, ಎಂ.ಜೆ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಹಿಳೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ಜನರು ನಿಂತು ಹಬ್ಬವನ್ನು ವೀಕ್ಷಿಸಿದರು.

ಹೋಳಿ ಹಬ್ಬವನ್ನು ನೋಡಲೆಂದೇ ನೂರಾರು ಸಂಖ್ಯೆಯಲ್ಲಿ ವಯಸ್ಕರು ಕೂಡ ಬಂದಿದ್ದರು. ಜನರು ಸೆಲ್ಪಿ ಪೋಟೋಗಳನ್ನು ವೀಡಿಯೋಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಖುಷಿಪಟ್ಟರು. 

ಇದಲ್ಲದೆ ನಗರದ ಎಲ್ಲೆಡೆ ಹೋಳಿ ಹಬ್ಬ ಆಚರಿಸಿದ್ದು ಕಂಡುಬಂದಿತು. ಬಸ್‍ನಿಲ್ದಾಣ ಗಾಂಧಿಬಜಾರ್, ಕೋಟೆರಸ್ತೆ, ಪೊಲೀಸ್ ಚೌಕಿ, ವಿದ್ಯಾನಗರ , ಕಲ್ಲಳ್ಳಿ, ಡಿ.ವಿ.ಎಸ್. ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಸಾಗರ ರಸ್ತೆ, ಗೋಪಾಳ ಬಡಾವಣೆ ಮುಂತಾದ ಅನೇಕ ಕಡೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಕೂಡ ಹಬ್ಬದಲ್ಲಿ ಪಾಲ್ಗೊಂಡರು.

ಅನೇಕ ಯುವಕರು ಮತ್ತು ಯುವತಿಯರು ಕೂಡ ತಮ್ಮ ಬೈಕ್‍ಗಳಲ್ಲಿ ಸಂಚರಿಸುತ್ತ ಘೋಷಣೆ ಕೂಗುತ್ತ ಪರಸ್ಪರ ಬಣ್ಣ ಎರಚುತ್ತ ಮೂರು ಜನ ಸವಾರಿ ಮಾಡುತ್ತ ನಗರದ ತುಂಬ ಬೈಕ್ ರ್ಯಾಲಿ ಮಾಡಿ ಹಬ್ಬದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.

ಹೋಳಿ ಹಬ್ಬ ಸಾಮರಸ್ಯದ ಸಂಕೇತವಾಗಿದೆ. ಬಣ್ಣಗಳನ್ನುಎಲ್ಲರೂ ಸೇರಿ ಎರಚುವುದು ಸಹಿಷ್ಣುತೆಯ ಸಂಕೇತವಾಗಿದೆ. ಶುದ್ಧ ಮನಸ್ಸಿನ ಈ ಹೋಳಿ ಹಬ್ಬಕ್ಕೆ ಯುವಕರ ರಂಗ ರಂಗಿನ ಭಾವನೆಗಳು ಕೂಡ ಜೊತೆಯಾಗಿ ಹಬ್ಬದ ಸಂಭ್ರಮವನ್ನು ಹಿಮ್ಮಡಿಸಿತ್ತು. ಈ ಬಾರಿ ಕರ್ಕಶ ಶಬ್ದಗಳನ್ನು ಹೊರಹಾಕುವ ಬೈಕ್‍ಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಹಲವು ಕಡೆ ಕಂಡುಬಂದಿತು. ಕೆಲವು ಕಡೆ ಸಾರ್ವಜನಿಕರಿಗೆ ಕಿರಿಕಿರಿಯೂ ಆಯಿತು. ಒಟ್ಟಾರೆ ಈ ಬಾರಿಯ ಹೋಳಿ ಹಬ್ಬ ಅತ್ಯಂತ ಸಂಭ್ರಮದಿಂದ ನಡೆಯಿತು.

By admin

ನಿಮ್ಮದೊಂದು ಉತ್ತರ

error: Content is protected !!