ಶಿವಮೊಗ್ಗ,ಮಾ.15: ಮಾ.20 ರಂದು ಗೀತಾಶಿವರಾಜ್‍ಕುಮಾರ್ ಮತ್ತು ಶಿವರಾಜ್‍ಕುಮಾರ್ ಶಿವಮೊಗ್ಗಕ್ಕೆ ಬರಲಿದ್ದು, ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.20ರಂದು ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ಗೀತಾಶಿವರಾಜ್‍ಕುಮಾರ್‍ರವರ ಜೊತೆಗೆ ಶಿವರಾಜ್‍ಕುಮಾರ್ ಕೂಡ ಬರುತ್ತಾರೆ. ನಂತರ ತಾಲ್ಲೂಕು ಮಟ್ಟದಲ್ಲಿ ಪ್ರಚಾರ ಆರಂಭವಾಗುತ್ತದೆ. ಶಿವರಾಜ್‍ಕುಮಾರ್ ತಮ್ಮ ಪತ್ನಿಗಾಗಿ ಪ್ರಚಾರ ಮಾಡುತ್ತಾರೆ. ಅದು ಅವರ ಜವಬ್ದಾರಿ ಕೂಡ ಆಗಿದೆ. ಹಲವು ಸಭೆಗಳು ಶಿವಮೊಗ್ಗದಲ್ಲಿ ನಡೆಯಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಬರಲಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಜನರಿಗೆ ಈಗಾಗಲೇ ನಮ್ಮ ಸರ್ಕಾರದ ಮೇಲೆ ವಿಶ್ವಾಸ, ನಂಬಿಕೆ, ಪ್ರೀತಿ ಬಂದಿದೆ. ಈ ಬಾರಿ ನಾವು ಗೆದ್ದೆಗೆಲ್ಲುತ್ತೇವೆ. ಬಿಜೆಪಿಯವರು ಪ್ರಚಾರ ತೆಗೆದುಕೊಳ್ಳುತ್ತಾರೆ. ಆದರೆ ನಾವು ತೆಗೆದುಕೊಳ್ಳುತ್ತಿಲ್ಲ ಅಷ್ಟೇ. ಈ ರಾಜ್ಯಕ್ಕೆ ನಿರ್ಮಲ ಸೀತಾರಾಮ್‍ರವರ ಸಾಧನೆ ಏನು ಎಂದು ನಾವು ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.

ಬೋರ್ಡ್ ಪರೀಕ್ಷೆ ಮಾಡಬೇಕೆಂಬ ಹಠ ಇಲ್ಲ. 10ನೇ ತರಗತಿಗೆ ಹೆಚ್ಚು ಭಯವಿತ್ತು. ಅದನ್ನು ಹೋಗಲಾಡಿಸಲು ಪಬ್ಲಿಕ್ ಪರೀಕ್ಷೆ ಬೇಕು ಅಷ್ಟೇ. ಸಂಘ ಸಂಸ್ಥೆಗಳಿಗೆ ಕೋರ್ಟ್‍ಗೆ ಹೋಗಬೇಡಿ ಎಂದು ಹೇಳಲು ಆಗುವುದಿಲ್ಲ. ಅದೆಲ್ಲವು ಮುಂದೆ ತೀರ್ಮಾನವಾಗುತ್ತದೆ. ವಿದ್ಯಾರ್ಥಿಗಳ, ಪೋಷಕರ ಹಿತದೃಷ್ಟಿಯನ್ನು ಇಟ್ಟುಕೊಂಡು ಶಿಕ್ಷಣಸಚಿವನ್ನಾಗಿ ನಾನು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ವಕ್ತಾರ ಆಯನೂರು ಮಂಜುನಾಥ್,  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ಹೆಚ್.ಎಸ್. ಸುಂದರೇಶ್, ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ಕಲೀಂ ಪಾಶಾ, ಇಕ್ಕೇರಿ ರಮೇಶ್, ಎನ್.ಡಿ.ಪ್ರವೀಣ್‍ಕುಮಾರ್, ಜಿ.ಪದ್ಮನಾಭ್, ಶಿ.ಜು.ಪಾಶ,  ಪಿ.ಎಸ್.ಗಿರೀಶ್‍ರಾವ್, ಎಂ.ಟಿ. ದಿನೇಶ್ ಪಾಟೀಲ್, ವೈ.ಹೆಚ್.ನಾಗರಾಜ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!