ಶಿವಮೊಗ್ಗ,ಮಾ.೪: ಅಕೇಶಿಯಾ ಮತ್ತು ನೀಲ್‌ಗಿರಿಯನ್ನು ನಿಷೇಧಿಸಲು ಆಗ್ರಹಿಸಿ, ಎಂಪಿಎಂ ಕಾರ್ಖಾನೆಗೆ ನೀಡಿದ್ದ ಅರಣ್ಯ ಭೂಮಿಯನ್ನು ಸರ್ಕಾರ ವಾಪಾಸ್ಸು ಪಡೆಯಬೇಕು ಎಂದು ಆಗ್ರಹಿಸಿ ’ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ರವರಿಗೆ ಮನವಿ ಸಲ್ಲಿಸಿತು.


ಮಲೆನಾಡು ಪಶ್ಚಿಮಘಟ್ಟಗಳ ಶ್ರೇಣಿ ನಿತ್ಯ ಹರಿದ್ವರ್ಣದ ಕಾಡಾಗಿದೆ. ಇಲ್ಲಿ ಹಲವು ನದಿಗಳು ಜನ್ಮತಾಳಿವೆ. ಜೀವ ವೈವಿಧ್ಯ ಪ್ರದೇಶವಿದು. ಇಂತಹ ಪರಿಸರ ಏರುಪೇರಾದರೆ ವನ್ಯಜೀವಿಗಳು ಮಾತ್ರವಲ್ಲ ಮಾನವ ಸಂಕುಲದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪ್ರದೇಶಗಳಲ್ಲಿ

ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಮನವಿದಾರರು ತಿಳಿಸಿದರು.
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ನೀಡಿದ್ದ ೨೦೦೦೫.೪೨ಹೆಕ್ಟೆರ್ ಅರಣ್ಯ ಭೂಮಿ ೨೦೨೦ರ ಆಗಸ್ಟ್ ೧೨ಕ್ಕೆ ಲೀಸ್ ಅವಧಿ

ಮುಗಿದಿದೆ. ಎಂಪಿಎಂ ಕಾಗದ ಕಾರ್ಖಾನೆ ೨೦೧೫ಕ್ಕೆ ಬಂದ್ ಆಗಿದೆ. ಹೀಗಿದ್ದ ಮೇಲೂ ಈ ಲೀಸ್‌ನ್ನು ಮುಂದುವರಿಸುವ ಅಗತ್ಯ ಇಲ್ಲ. ಅರಣ್ಯ ಇಲಾಖೆಗೆ ಸೇರಿದ ಈ ಭೂಮಿಯನ್ನು ವಾಪಾಸ್ಸು ಪಡೆದುಕೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದರು.


ಎಂಪಿಎಂಗೆ ನೀಡಿದ್ದ ಈ ಲೀಜ್ ಭೂಮಿಯಲ್ಲಿ ನೀಲಗಿರಿ ಮತ್ತು ಅಕೇಶಿಯಾ ಗಿಡಗಳನ್ನೇ ಹೆಚ್ಚಾಗಿ ಬೆಳೆಯಲಾಗಿದ್ದು, ಇದು ಪಶ್ಚಿಮ ಘಟ್ಟದಲ್ಲಿರುವ ಸ್ವಾಭಾವಿಕ ಅರಣ್ಯಕ್ಕೆ ವ್ಯತಿರಿಕ್ತವಾಗಿದೆ. ಈ ಎರಡು ಜಾತಿಗಳ ಮರಗಳು, ಪ್ರಕೃತಿ ವಿರೋಧಿಯಾಗಿವೆ. ಆದ್ದರಿಂದ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪುನಃ ವಾಪಾಸ್ಸು ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ನೀಲಗಿರಿ ಮತ್ತು ಅಕೇಷಿಯ ಗಿಡಗಳು ಪರಿಸರ ವಿರೋಧಿಯಾಗಿವೆ. ಇವುಗಳನ್ನು ಬೆಳೆಸಿದಲ್ಲಿ ಮಲೆನಾಡಿನ ಪರಿಸರವೇ ಹಾಳಾಗಿ ಹೋಗುತ್ತದೆ. ಜೊತೆಗೆ ತಾಪಮಾನ ಹೆಚ್ಚುತ್ತದೆ. ಈ ಭೂಮಿಯಲ್ಲಿ ಸ್ವಾಭಾವಿಕ ಅರಣ್ಯವನ್ನು ಪ್ರೋತ್ಸಾಹಿಸಬೇಕು. ಅಕೇಶಿಯ ಮತ್ತು ನೀಲಗಿರಿಯನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ’ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ದ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಪ್ರೊ. ರಾಜೇಂದ್ರ ಚೆನ್ನಿ, ಎಂ.ಗುರುಮೂರ್ತಿ, ಪ್ರಸನ್ನ, ಹೆಚ್.ಟಿ.ಕೃಷ್ಣಮೂರ್ತಿ, ರಾಜಪ್ಪ, ಮಂಜುನಾಥ್ ನವುಲೆ, ತ್ಯಾಗರಾಜ್ ಮಿಥ್ಯ, ಸುರೇಶ್ ಅರಸಾಳು, ಬಾಲುನಾಯ್ಡು, ಚಂದ್ರಪ್ಪ, ಅನಿಲ್‌ಶೆಟ್ಟರ್, ನಾಗರಾಜ್ ಚಟ್ನಳ್ಳಿ, ದೇಷಾದ್ರಿ ಹೊಸಮನೆ, ಕೃಪಾ, ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!