ಶಿವಮೊಗ್ಗ,ಮಾ.೨: ಶ್ರೀಅತಿರುದ್ರ ಮಹಾಯಾಗ ಸಂಚಾಲನಾ ಸಮಿತಿ ಹಾಗೂ ಭಕ್ತ ವೃಂದದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಾಗೂ ದೇಶದ ನೆಚ್ಚಿನ ಮಹಾನಾಯಕ ನರೇಂದ್ರ ಮೋದಿ ಜೀಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ
ಮಾ. ೫ ಮತ್ತು ೬ ರಂದು ಅತಿರುದ್ರ ಮಹಾಯಾಗವನ್ನು ವಿನೋಬನಗರದ ಮುಖ್ಯ ರಸ್ತೆಯಲ್ಲಿರುವ ಶಿವಾಲಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಗೌರವಾಧ್ಯಕ್ಷರು ಎನ್.ಜೆ.ರಾಜಶೇಖರ್ರವರು ತಿಳಿಸಿದರು
.
ಅವರು ಇಂದು ದೇವಸ್ಥಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.೫ ರ ಬೆಳಗ್ಗೆ ೮ ಗಂಟೆಗೆ ಮಹಾಸಂಕಲ್ಪದೊಂದಿಗೆ ಗಂಗಾಪೂಜೆ, ಗಣಪತಿ, ನಾಂದಿ, ಪುಣ್ಯಾಹ, ಉಮಾಮಹೇಶ್ವರ, ಪಂಚಬ್ರಹ್ಮ ಕಲಶ, ಏಕದಶ ರುದ್ರ ಕಲಶಾರಾಧನೆ, ನವಗ್ರಹ ಹಾಗೂ ಪೂಜಾದಿಗಳು ಪ್ರಾರಂಭವಾಗಲಿವೆ. ಬೆಳಗ್ಗೆ ೧೦ ಗಂಟೆಗೆ ಶ್ರೀ ಅತಿರುದ್ರ ಮಹಾಯಾಗ, ಶಿವಾಗ್ನಿ ಪ್ರತಿಷ್ಠೆ ನಡೆಯಲಿದೆ ಎಂದರು.
ಅಂದು ಸಂಜೆ ೪ ಗಂಟೆಗೆ ಉತ್ತರಾರ್ಧ ಪೂಜೆ ಆರಂಭಗೊಳ್ಳಲಿದೆ. ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ
ಕ್ಷೇಮಾಭಿವೃದ್ಧಿ ಸಂಘದ ತಂಡವು ೧೨೧ ಪುರೋಹಿತರೊಂದಿಗೆ ೧೧ ಹೋಮಕುಂಡದಲ್ಲಿ ಅತಿರುದ್ರ ಮಹಾಯಾಗವನ್ನು ನಡೆಸಿಕೊಡಲಿದೆ ಎಂದರು.
ಬಿಳಕಿ ಹಿರೇಮಠದ ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗೇಶ್ವರ ಶಿವಚಾರ್ಯ ಸ್ವಾಮೀಜಿ, ಕವಲೆದುರ್ಗ ಮಠದ ಶ್ರೀ ರಾಜಗುರು ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಮಹಾಯಾಗವು ನೆರವೇರಲಿದೆ ಎಂದರು.
ಸಮಿತಿಯ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಮಾ.೬ ರಂದು ಬೆಳಗ್ಗೆ ೮ರಿಂದ ಅತಿರುದ್ರಮಹಾಯಾಗ ಆರಂಭವಾಗಿ ೧೧ಕ್ಕೆ ಪೂರ್ಣಾಹುತಿ, ಮಹಾಮಂಗಳರಾತಿ, ತೀರ್ಥಪ್ರಸಾದ ವಿಯೋಗ ಇರುತ್ತದೆ. ೧೧.೩೦ ಕ್ಕೆ ನಡೆಯಲಿರುವ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ಶ್ರೀ ಉಜ್ಜಯನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ೧೦೦೮ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ
ಭಗವತ್ಪಾದ ಮಹಾಸ್ವಾಮೀಜಿ ಹಾಗೂ ಆನಂದಪುರ ಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗ್ದದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಮಹಾ ಸ್ವಾಮಿಗಳು ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸುಪ್ರೀಂಕೋರ್ಟ್ ವಕೀಲರು ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ ಭಾಗವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ್ರು, ಡಿ.ಎಸ್.ಅರುಣ್, ಭಾರತಿಶೆಟ್ಟಿ ಭಾಗವಹಿಸುವರು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ವೇದೋಕ್ತವಾದ ನಮಕ(ರುದ್ರ)ದಿಂದ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಭಕ್ತಿ, ಶ್ರದ್ಧೆಯಿಂದ ಒಂದು ಬಾರಿ ರುದ್ರಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, ೧೧ ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, ೧೨೧ ಬಾರಿ ಮಾಡಿದರೆ ಲಘು(ಶತ) ರುದ್ರಾಭಿಷೇಕ, ೧೩೩೧ ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು ೧೪,೬೪೧ ಬಾರಿ ಮಾಡಿದರೆ ಅತಿರುದ್ರಾಭಿಷೇಕವಾಗುವುದು. ಈ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಚ್.ವಿ.ಮಹೇಶ್ವರಪ್ಪ, ಎಸ್.ದತ್ತಾತ್ರಿ, ಎಸ್. ಜ್ಞಾನೇಶ್ವರ್, ಅಶ್ವಥ್ ನಾರಾಯಣ ಶೆಟ್ಟಿ, ಜಿ.ಆರ್. ವಾಸುದೇವ್, ಎನ್.ಡಿ.ಸತೀಶ್, ಬಳ್ಳಕೆರೆ ಸಂತೋಷ್, ಸಿ.ಮಹೇಶ್ಮೂರ್ತಿ, ದಿವಾಕರ್ ಶೆಟ್ಟಿ, ಮೋಹನ್ಕುಮಾರ್ ಬಾಳೆಕಾಯಿ, ಮಹಾಲಿಂಗಯ್ಯ ಶಾಸ್ತ್ರಿ, ನಾಗಯ್ಯ ಶಾಸ್ತ್ರಿಗಳು,ಇ.ವಿಶ್ವಾಸ್, ಅನಿತಾ ರವಿಶಂಕರ್, ಮೋಹನ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.