ಶಿವಮೊಗ್ಗ,ಮಾ.೧: ಬೆಳೆ ಬೆಳೆಯುವ ರೈತ ಬೆಳೆ ಬೆಳೆಯುವ ವಿಧಾನವನ್ನು ರೈತ ಮೊದಲು ಕಲಿಯಬೇಕು. ಅವೈಜ್ಞಾನಿಕ ಪದ್ಧತಿಯಿಂದ ಹೊರಬರಬೇಕು ಎಂದು ರೈತ ನಾಯಕ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನವಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಕೊಳವೆ ಬಾವಿಗೆ ಜಲ ಮರುಪೂರಣ ಮತ್ತು ಅಂತರ್ಜಲ ಪುನಶ್ಚೇತನ ಕಾರ್ಯಗಾರ ಹಾಗೂ ಪ್ರಾತ್ಯಕ್ಷತೆಯನ್ನು ಉದ್ಘಾಟಿಸಿ ಮಾತನಾಡಿದರು.
ಬರಗಾಲ ತಾಂಡವವಾಡುತ್ತಿದೆ. ರೈತ ನೀರಿಗಾಗಿ ಅನೇಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದಾನೆ. ಎಲ್ಲಾ ಕಡೆ ನೀರು ಬತ್ತಿ ಹೋಗಿ ಜಲಕ್ಷಾಮ ಎದುರಾಗಿದೆ. ಜಲಾಶಯಗಳು ಬರಿದಾಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಸಾವಿರ ಅಡಿ ಆಳಕ್ಕೆ ಹೋದರೂ ಬೋರ್ವೆಲ್ ನೀರು ಸಿಗುತ್ತಿಲ್ಲ. ಜಲ ಮರುಪೂರಣ ಬಗ್ಗೆ ಮಾಹಿತಿ ಕೊರತೆಯಿಂದ ರೈತ ನಷ್ಟ ಅನುಭವಿಸುತ್ತಿದ್ದಾನೆ
. ಈ ಕಾರ್ಯಾಗಾರದ ಮಾಹಿತಿ ಪಡೆದುಕೊಳ್ಳಿ. ಇನ್ನುಮುಂದೆ ನೀರಿಗೋಸ್ಕರ ವೈಯಕ್ತಿಕ ಯುದ್ಧ ನಡೆಯುವ ಕಾಲ ಬಂದಿದೆ ಎಂದರು.
ನಾವು ಅಂತರ್ಜಲಕ್ಕೆ ಬಂಡವಾಳ ಹೂಡುತ್ತಿದ್ದೇವೆ. ಆದರೆ ಅದು ವಿಫಲವಾದಾಗ ಏನು ಮಾಡಬೇಕೆಂಬ ಅರಿವು ನಮಗಿಲ್ಲ ಎಂದರು.
ಇನ್ನೋರ್ವ ರೈತ ನಾಯಕ ಕೆ.ಟಿ. ಗಂಗಾಧರ್ ಮಾತನಾಡಿ, ಬೋರ್ವೆಲ್ ರೀಚಾರ್ಜ್ಗೆ ವೈಜ್ಞಾನಿಕ ರೀತಿ ಅನುಸರಿಸಿದಲ್ಲಿ ೧೦ ಕೆಜಿ ಅಡಿಕೆ ಬೆಲೆಯಲ್ಲಿ ಮಾಡಬಹುದಾಗಿದೆ. ಒಂದು ಬೋರ್ವೆಲ್ ವಿಫಲವಾದರೆ ಇನ್ನೊಂದಕ್ಕೆ ಕೈ ಹಾಕುತ್ತೇವೆ. ಯಾವ ಬೆಳೆಗೆ ಎಷ್ಟು ನೀರು ಎಂಬ ಅರಿವಿಲ್ಲ. ನೀರನ್ನು ಜೋಪಾನ ಮಾಡಿ ಬಳಸಿದರೆ ನೀರು ನಮ್ಮನ್ನು ಕಾಪಾಡುತ್ತದೆ ಎಂದರು.
ಕರ್ನಾಟಕದ ಅಂತರ್ಜಲ ತಜ್ಞರು ವಿಜ್ಞಾನಿಗಳು, ಜಿಯೋ ರೈನ್ ವಾಟರ್ ಸಂಸ್ಥೆ ಮುಖ್ಯಸ್ಥರಾದ ಎನ್.ಜೆ. ದೇವರಾಜ್ ರೆಡ್ಡಿ ರೈತರನ್ನುದ್ದೇಶಿಸಿ ಮಾತನಾಡಿ, ಫೇಲ್ ಆದ ಬೋರ್ವೆಲ್ ಗಳಿಂದ ನೀರನ್ನುತಗೆಯುವುದು ಹೇಗೆ? ಕಡಿಮೆ ನೀರು ಬರುವ ಬೋರ್ ವೆಲ್ ಗಳಿಂದ ಹೆಚ್ಚು ನೀರು ತೆಗೆಯುವುದು ಹೇಗೆ? ಯಾವ ಬೋರ್ ವೆಲ್ ಗಳನ್ನು ರೀ ಚಾರ್ಜ್ ಮಾಡಬಹದು? ಅದರ ಸಾಮರ್ಥ್ಯ ಕಂಡು ಹಿಡಿಯುವುದು ಹೇಗೆ ಮತ್ತು ಸರಿಯಾದ ವಿಧಾನ ಯಾವುದು? ಅಂತರ್ಜಲ ಹೆಚ್ಚಿಸುವುದು ಹೇಗೆ ಮತ್ತು ಒಮ್ಮೆ ರೀ ಚಾರ್ಜ್ ಮಾಡಿದ ಬೋರ್ ವೆಲ್ ಎಷ್ಟು ನೀರನ್ನು
ಒದಗಿಸುತ್ತದೆ? ನಮ್ಮ ದೇಶದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ದೊಡ್ಡ ರಾಷ್ಟ್ರವಾದರೂ ಕೆಲವೊಂದು ಕಡೆ ೭೦೦ ಜನಸಂಖ್ಯೆ ಇರುವೆಡೆ ೫೦೦ ಬೋರ್ ವೆಲ್ ಕೊರೆದರೂ ನೀರು ಯಾಕಿಲ್ಲ? ಒಂದು ಎಕರೆ ಹೊಲ ಇರುವ ರೈತ ೧೦ ಹೆಚ್.ಪಿ. ಮೋಟರ್ ಬಳಸುವ ಅವಶ್ಯಕತೆ ಇಲ್ಲದಿದ್ದರೂ ಆತ ಯಾಕೆ ಬಳಸುತ್ತಾನೆ ಅದರಿಂದ ಆತನಿಗಾಗುವ ನಷ್ಟ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ
ನೀಡಿದರು.
ಈ ಸಂದರ್ಭದಲ್ಲಿ ದೇವರಾಜ್ ರೆಡ್ಡಿ ಅವರಿಗೆ ಭಗಿರಥ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯತು. ಕಾರ್ಯಕ್ರಮದಲ್ಲಿ ನವ ಕರ್ನಾಟಕ ನಿರ್ಮಾಣ ವೇದಿಕೆಯ ಗೋ. ರಮೇಶ್ ಗೌಡ, ಜಿಲ್ಲಾ ಒಕ್ಕಲಿಗರ ಒಕ್ಕೂಟದ ಗೌರವಾಧ್ಯಕ್ಷೆ ಡಾ. ಶಾಂತಾ ಸುರೇಂದ್ರ, ಪ್ರಮುಖರಾದ ದಿನೇಶ್, ರಾಜಶೇಖರ್, ಗೀತಾ ಸತೀಶ್, ವಿಜಯಕುಮಾರ್, ಸಂತೋಷ್, ಧನಲಕ್ಷ್ಮಿ, ಮತ್ತಿತರರು ಇದ್ದರು.