ಶಿವಮೊಗ್ಗ, ಮಾ.೦೨:
ಮಗು ಮೊದಲು ತನ್ನಲ್ಲಿ ತಾನು ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯವಶ್ಯಕ. ತನ್ನ ಕಲಿಕೆ ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ತಿಳಿಸಿದರು.
ಅವರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಶಾರದಾ ಪೂಜೆಯನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಾ, ಮೊಬೈಲ್ ಬಳಕೆ ಅತಿಯಾದರೆ ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದನ್ನು ಹಿತಮಿತವಾಗಿ ಬಳಸಿದರೆ ನಮ್ಮ
ಜೀವನಕ್ಕೆ ಸಹಾಯ ಮಾಡುತ್ತದೆ. ಆದರೆ ವಿದ್ಯಾರ್ಥಿಗಳಾದ ನಿಮಗೆ ಅದರಲ್ಲಿ ಕೆಟ್ಟದ್ದನ್ನು ಬಳಸಿಕೊಳ್ಳುವ ಮನಸ್ಥಿತಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ಮೊಬೈಲನ್ನು ಮುಟ್ಟದೇ ಪುಸ್ತಕದ ಮೊರೆ ಹೋಗಿ ಅದು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದ ಅವರು, ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು. ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ
ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳೆಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. ೧೦ ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ ಅಲ್ಲಿಯವರೆಗೆ ಓದಿದ್ದನ್ನು ಮರುಕಳಿಸಬೇಕು.
ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳಲ್ಲಾಗಲಿ, ವಿದ್ಯಾರ್ಥಿ ೮ ಗಂಟೆಗಳ ನಿದ್ರೆ ಅತ್ಯಾವಶ್ಯಕ, ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು. ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಸತೀಶ್ ಡಿ.ವಿ. ಶ್ರೀ ಆದಿಚುಂಚನಗಿರಿ ಟ್ರಸ್ಟ್ ಭದ್ರಾವತಿ ಶಾಖೆ ಆಡಳಿತಾಧಿಕಾರಿಗಳಾದ ಜಗದೀಶ್ ಬಿ., ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಶಾಲೆ ಮತ್ತು ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಹೇಮಾ, ಗುರುಪುರ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು
ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್.ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್, ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ವೀಣಾ,ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.