ಶಿವಮೊಗ್ಗ, ಫೆ.29:
ನಿಗಮ ಮಂಡಳಿಗೆ ಈ ಬಾರಿ ಕಾರ್ಯಕರ್ತರನ್ನು ಪರಿಗಣಿಸಲಾಗುವುದು ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಳಿಸಿಕೊಂಡಿದ್ದಾರೆ. ಪಕ್ಷದ 44 ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಿಗೆ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ.
ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಗೆ ಬುಧವಾರ (ಫೆ.28) ಸಿಎಂ ಸಿದ್ದರಾಮಯ್ಯ ಅವರು ಅನುಮೋದನೆಯನ್ನು ಕಳಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ನೇಮಕಾತಿ ಪತ್ರ ರವಾನೆ ಮಾಡಲಾಗಿದೆ.
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸ್ಬೂಡಾ) ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ಎಸ್ ಸುಂದರೇಶ್ ಅವರನ್ನು ನೇಮಕ ಮಾಡಿದ್ದಾರೆ.
ಸುಂದರೇಶ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಕೊಂಡ ತೃಪ್ತಿಪಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೂರು ಸ್ಥಾನ ಪಡೆಯುವಲ್ಲಿ ಮಹತ್ತರ ಶ್ರಮವಹಿಸಿದ್ದು ಇಲ್ಲಿ ಉಲ್ಲೇಖಾರ್ಹ.
ಅಂತೆಯೇ ಶಿವಮೊಗ್ಗ ಗ್ರಾಮಾಂತರ ಅಭ್ಯರ್ಥಿಯಾಗುವ ಆಕಾಂಕ್ಷೆಯಿಂದ ಇಡೀ ಗ್ರಾಮಾಂತರ ಕ್ಷೇತ್ರದಲ್ಲಿ ವಿಶೇಷವಾಗಿ ಜನ ಮನ್ನಣೆ ಪಡೆದು ಟಿಕೆಟ್ ಸಿಗದಿದ್ದಾಗಲೂ ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸಿದ ಮಹಿಳಾ ಕಾಂಗ್ರೆಸ್ ನಾಯಕಿ ಜಿ. ಪಲ್ಲವಿ ಅವರಿಗೆ ಈ ಬಾರಿ ಅತ್ಯುತ್ತಮ ಸ್ಥಾನವನ್ನು ನೀಡುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದ್ದು, ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಪಲ್ಲವಿ ಅವರನ್ನು ನೇಮಕ ಮಾಡಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಮೂಲಕ ಶಾಸಕರಾಗುವ ಕನಸು ಹೊತ್ತು ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡಿ ಕಿಮ್ಮನೆ ರತ್ನಾಕರ ಅವರ ಪರವಾಗಿ ಕರ್ತವ್ಯ ನಿರ್ವಹಿಸಿದ ಹಾಗೂ ವಿಶೇಷವಾಗಿ ಸಹಕಾರಿ ವಲಯದ ರಾಜ್ಯಮಟ್ಟದ ನಾಯಕರಂದೇ ಗುರುತಿಸಿಕೊಂಡ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ ಮಂಜುನಾಥಗೌಡ ಅವರನ್ನು ಅತ್ಯಂತ ಪ್ರಮುಖವಾದ ಎಪ್ಪತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದು ಇಲ್ಲಿ ವಿಶೇಷ.
ಅಂತೆಯೇ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷಗಿರಿ ಬೇರೆ ಜಿಲ್ಲೆಯವರ ಪಾಲಾಗಿದ್ದು, ಅಲ್ಲಿನ ನಾಯಕ ಡಾ. ಅಂಶುಮನ್ ಅವರಿಗೆ ದೊರತಿದೆ.