ಶಿವಮೊಗ್ಗ, ಫೆ.೨೮: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಇಂದು ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.


ಪ್ರತಿಭಟನೆ ಮಾಡುತ್ತಿದ್ದ ಯುವಮೋರ್ಚಾದ ಪದಾಧಿಕಾರಿಗಳು ಮತ್ತು ಮಹಿಳೆಯರು ಕಾಂಗ್ರೆಸ್ ಕಚೇರಿಯತ್ತ ನುಗ್ಗಿ, ಕಚೇರಿಯ ಗೇಟನ್ನು ತೆಗೆಯಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದರು.


ಮಹಾವೀರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಸ್ವಾತಂತ್ರ್ಯ ಬಂದ ನಂತರವು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗುತ್ತಿರುವುದು ನಾಚಿಗೇಡಿತನ ವಿಷಯವಾಗಿದೆ. ವಂದೇ ಮಾತರಂ, ಭಾರತ್‌ಮಾತಾಕೀ ಎಂದು ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಮುಖಂಡರು ಈಗ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳಿದ ವ್ಯಕ್ತಿಯನ್ನು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದರು.


ಇದೊಂದು ಹೇಯ ಕೃತ್ಯವಾಗಿದೆ ರಾಜ್ಯಸಭಾ ಸದಸ್ಯನ ಪರವಾಗಿ ಘೋಷಣೆ ಕೂಗಿದವರು ಪಾಕಿಸ್ತಾನದ ಪರವಾಗಿಯೂ ಘೋಷಣೆ ಕೂಗಿದ್ದಾರೆ. ಈ ಘೋಷಣೆ ಕೂಗಿದ್ದರೂ ಕೂಡ ಮುಖ್ಯಮಂತ್ರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಓಲೈಕೆ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.


ಇತ್ತೀಚೆಗೆ ದೇಶ ವಿಭಜನೆಯ ಮಾತು ಕೇಳಿಬಂದಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಾಗ ಪಾಕಿಸ್ಥಾನದ ಪರ ಘೋಷಣೆ ಕೇಳಿ ಬಂದಿದೆ. ಸರ್ಕಾರ ರಾಷ್ಟ್ರದ್ರೋಹಿ ಹೇಳಿಕೆ ಕೊಟ್ಟವರನ್ನು ಕೂಡಲೇ ಬಂಧಿಸಬೇಕು. ಇದೊಂದು ತಲೆತಗ್ಗಿಸುವ ಕೆಲಸವಾಗಿದೆ. ಜಿನ್ನಾ ಸಂಸ್ಕೃತಿಯನ್ನು ನೋಡಬೇಕಾಗಿದೆ. ನಾಸೀರ್ ಹುಸೇನ್ ಕೂಡಲೇ ಕ್ಷಮೆ ಕೇಳಬೇಕು. ಸಿ.ಎಂ. ಹಾಗೂ ಡಿ.ಸಿ.ಎಂ. ಯಾವುದೇ ಕಾರಣಕ್ಕೂ ಇಂತವರನ್ನು ಬೆಂಬಲಿಸಬಾರದು. ಗೃಹಮಂತ್ರಿ ಪರಮೇಶ್ವರ್ ಮಾತ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಇದು ಸ್ವಾಗತರ್ಹ ಎಂದರು.


ಪ್ರತಿಭಟನೆಯಲ್ಲಿ ಪ್ರಮುಖರಾದ ಮೋಹನ್‌ರೆಡ್ಡಿ, ಕೆ.ಇ.ಕಾಂತೇಶ್, ಸೀತಾಲಕ್ಷ್ಮೀ, ಸುರೇಖಾ ಮುರಳೀಧರ್, ಯಶೋಧ ವೈಷ್ಣವ್, ಪುರುಷೋತ್ತಮ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!