ಶಿವಮೊಗ್ಗ: ಚಿತ್ರ ನಟ ದರ್ಶನ್ ಅವರು ಮಹಿಳೆಯರನ್ನು ಅಗೌರವಿಸುವಂತಹ, ನಿಂದಿಸುವ, ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮನೋಭಾವವನ್ನು ಪ್ರದರ್ಶಿಸುತ್ತಾ ಮನಸ್ಸು ಸ್ಥೀಮಿತದಲ್ಲಿ ಇರದವರಂತೆ ವರ್ತಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ತಾಲೂಕಿನ ಹಸೂಡಿ ಗ್ರಾಪಂ ಅಧ್ಯಕ್ಷೆ
ಚೈತ್ರ ಆರ್. ಮೋಹನ್ ಅವರ ನೇತೃತ್ವದ ಮಹಿಳಾ ನಿಯೋಗವು ೨೬-೦೨-೨೦೨೪ರ ಸೋಮವಾರ ಮಧ್ಯಾಹ್ನ ಜಿಲ್ಲಾ ರಕ್ಷಣಾಧಿಕಾರಿಗಳ ಮುಖಾಂತರ ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಚಿತ್ರರಂಗಕ್ಕೆ ಬಂದು ೨೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಫೆಬ್ರವರಿ ೧೭ರಂದು ನಡೆದ ಬೆಳ್ಳಿ ಪರ್ವ ಡಿ-೨೫ ಕಾರ್ಯಕ್ರಮದಲ್ಲಿ ಚಿತ್ರ ನಟ ದರ್ಶನ್ ಅವರು ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಅವಳ ಅಜ್ಜಿನಾ ಬಡಿಯಾ ಎಂದು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅವರು ತಮ್ಮ ಮಾತಿನ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ ಹಾಗೂ ಅಗೌರವಿಸಿದ್ದಾರೆ.
ಯುವ ಜನರಿಗೆ ಮಾದರಿಯಾಗಿರಬೇಕಾದ ನಾಯಕ ನಟ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ದರ್ಶನ್ ಅವರು ಸ್ತ್ರೀ ಕುಲಕ್ಕೆ ಕಳಂಕ ತರುವಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಅವರನ್ನು ವಿಚಾರಣೆ ನಡೆಸಿ ಆತ ಬಳಸಿರುವ ಪದಗಳು ಭಾವನೆ ಬಗ್ಗೆ ಮಾಹಿತಿ ಪಡೆದು ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಈ ಹಿಂದೆ ಈ ನಟ ಹೆಂಡತಿಗೆ ಸಿಗರೇಟಿನಿಂದ ಸುಟ್ಟು ಮಾನಸಿಕ ಕಿರುಕುಳ ನೀಡಿ ಜೈಲುಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ಬಾಗಿಲು ತಟ್ಟಿದಾಗ ಬೆಡ್ ರೂಂ ಒಳಗೆ ಎಳೆದು ಕೊಂಡು ಬಟ್ಟೆ ಬಿಚ್ಚಿ ಕೂಡಿ ಹಾಕಬೇಕೆಂದು ಅಸಂಬದ್ಧ ಹೇಳಿಕೆ ನೀಡುವ ಮೂಲಕ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದರು.
ತೆರೆಯ ಮೇಲೆ ಹೆಣ್ಣನ್ನು ಗೌರವಿಸುವಂತೆ ಮಾತನಾಡುವ ನಟ ದರ್ಶನ್ ಸಾರ್ವಜನಿಕ ಕಾರ್ಯಕ್ರಮ ಹಾಗೂ ಮಾಧ್ಯಮಗಳ ಸಂದರ್ಶನದ ಸಂದರ್ಭದಲ್ಲಿ ಮಹಿಳೆಯರನ್ನು ಅಗೌರವಿಸುವಂತಹ, ನಿಂದಿಸುವ, ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ.
ಶೃತಿ, ಆಶಾ, ಯಶೋಧಮ್ಮ, ನೇತ್ರ, ಸುನೀತಾ, ಸೌಮ್ಯ, ಮಾಲಾಬಾಯಿ, ಮಹಾದೇವಿ ಶಿಕಾರಿಪುರ ಮತ್ತಿತರರು ನಿಯೋಗದಲ್ಲಿದ್ದರು.