ಶಿವಮೊಗ್ಗ, ಫೆ.15;
ಪ್ರಸ್ತುತ ಕಾಲಮಾನಕ್ಕೆ ಅನುವು ಮಾಡಿಕೊಡುವ ರೀತಿಯಲ್ಲಿ ಸೈದ್ಧಾಂತಿಕ ಪರಿಕಲ್ಪನೆಗಳ ಜೊತೆ ಜೊತೆಗೆ ಪ್ರಾಯೋಗಿಕ ಚಾಕಚಕ್ಯತೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು 3-ಡಿ ಪ್ರಿಂಟಿಂಗ್ ಕ್ಷೇತ್ರದಲ್ಲಿ ಘಟಿಸುತ್ತಿರುವ ಪ್ರಯೋಗಗಳ ಬಗ್ಗೆ ಆ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ತಮ್ಮ ಕಾರ್ಯ ಕ್ಷೇತ್ರಗಳ ಪರಿಧಿಯನ್ನು ವೃದ್ಧಿಸಿಕೊಳ್ಳುವಲ್ಲಿ ಶ್ರಮಿಸಬೇಕೆಂದು ವಿದ್ಯಾರ್ಥಿಗಳ ಮನಮುಟ್ಟುವಂತೆ ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಒಂದು ದಿನದ ತಾಂತ್ರಿಕ ಕಾರ್ಯಗಾರ ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಆಕೃತಿ
3-ಡಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿಯಾದ ರಾಘವೇಂದ್ರ ಸುರೇಂದ್ರ ಮಾತನಾಡುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಮೊದಲಿಗಿಂತಲೂ ಅತ್ಯಂತ ಹೆಚ್ಚಿನ ಪರಿಣಾಮಕಾರಿ ಮಾರ್ಗದಲ್ಲಿ ವಿದ್ಯಾರ್ಥಿಗಳು ಸೈದ್ಧಂತಿಕ ಪರಿಕಲ್ಪನೆಗಳ ಜೊತೆ ಜೊತೆಗೆ ಪ್ರಾಯೋಗಿಕ ಮಟ್ಟದಲ್ಲೂ ಸಹ ಅತಿಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುವುದು ಪ್ರಸ್ತುತತೆಯನ್ನು ಪಡೆದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದಿನನಿತ್ಯದ ಶೈಕ್ಷಣಿಕ ವಿಷಯಗಳು ಅರ್ಥೈಸುವಿಕೆಯೊಂದಿಗೆ, ಅವುಗಳ ಪ್ರಾಯೋಗಿಕ ಅಳವಡಿಕೆ ಮಾರ್ಗಗಳ ಪ್ರಸ್ತುತತೆಯ ಬಗ್ಗೆ ಆ ಮೂಲಕವಾಗಿ ತಿಳಿದುಕೊಳ್ಳುವುದು ಸಹ ಅತಿ ಅವಶ್ಯಕತೆಗಳಲ್ಲಿ ಒಂದಾಗಿದೆ. ತತ್ಸಂಬಂಧ ಉದ್ಯಮ ಕ್ಷೇತ್ರ – ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಂವಹನದ ಬಗೆಗಿನ ಮಾರ್ಗೋಪಾಯಗಳನ್ನು ಕಂಡುಹಿಡಿದು ಉನ್ನತೊನ್ನತಿಯನ್ನು ತಲುಪುವುದು ಬಹು ಮುಖ್ಯವಾಗಿದೆ ಎಂದರು.


ಇದರ ಒಂದು ಉದಾಹರಣೆಯಾಗಿ ‘ರೀಸೆಂಟ್ ಟ್ರೆಂಡ್ಸ್ ಇನ್ ಅಡ್ವಾನ್ಸಡ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ – 3-ಡಿ ಪ್ರಿಂಟಿಂಗ್’ ವಿಷಯದ ಕುರಿತಾಗಿ ರಾಘವೇಂದ್ರ ಸುರೇಂದ್ರ ತಮ್ಮ ಭಾಷಣದಲ್ಲಿ 3-ಡಿ ಪ್ರಿಂಟಿಂಗ್ ಕ್ಷೇತ್ರದ ಪ್ರಸ್ತುತತೆ, ಜರುಗುತ್ತಿರುವ ಹಲವಾರು ರೀತಿಯ ಪ್ರಾಯೋಗಗಳ ಆ ಮೂಲಕ ಮಾಹಿತಿಯನ್ನು ವಿದ್ಯಾರ್ಥಿ ಸಮೂಹಕ್ಕೆ ನೀಡುವ ಮೂಲಕ ದಿನನಿತ್ಯದ ಜೀವನದಲ್ಲಿ 3-ಡಿ ಪ್ರಿಂಟಿಂಗ್ ನ ಅವಶ್ಯಕತೆಗಳನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ಸೂಚ್ಯವಾಗಿ ತಿಳಿಸಿದರು.


ಜೊತೆ ಜೊತೆಗೆ ವಿದ್ಯಾರ್ಥಿಗಳು ಸಹ ಈ ಕ್ಷೇತ್ರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಅತ್ಯವಶ್ಯಕವಿರುವ ಚಾಕಚಕ್ಯತೆಗಳನ್ನು ಅಳವಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯುವರಾಜು ಬಿ ಎನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯವೂ ತಾವು ಅಭ್ಯಾಸ ಮಾಡುತ್ತಿರುವ ಹಲವಾರು ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಪಟ್ಟಿಯ ತರ ಚಟುವಟಿಕೆಗಳಲ್ಲೂ ಸಹ ಆಸಕ್ತಿಯನ್ನು ಹೊಂದಿರಬೇಕೆಂದು ತಿಳಿಸಿದರು. ಪಠ್ಯೇತರ ಚಟುವಟಿಕೆಗಳ ಪ್ರಾಯೋಗಿಕ ಪ್ರಸ್ತುತತೆಯನ್ನು ಅರ್ಥೈಸಿಕೊಂಡು ತಮ್ಮ ಮುಂದಿನ ಕಾರ್ಯಕ್ಷೇತ್ರವನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಮೂಲಕ ದೇಶಕ್ಕೆ, ಸಮಾಜಕ್ಕೆ ಹಾಗೂ ಪೋಷಕರಿಗೆ ಕೃತಜ್ಞತೆಯನ್ನು ಸಲ್ಲಿಸುವಲ್ಲಿ ಕಾರ್ಯತತ್ಪರರಾಗಬೇಕೆಂದು ಮನಮುಟ್ಟುವಂತೆ ತಿಳಿಸಿದರು.


ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯವನ್ನು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಪ್ರೀತಮ್ ಬಿ ಎಂ ಸಭಿಕರಿಗೆ ನೀಡಿದರು. ಮೆಕ್ಯಾನಿಕಲ್ ವಿಭಾಗದ ಬೋಧಕ ಸಿಬ್ಬಂದಿ ತಾರಾನಾಥ ಹೆಚ್. ಇದ್ದ ಸಭಿಕರನ್ನು ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ ಎಲ್ ವಂದಿಸಿದರು. ಪಿಇಎಸ್ಐಟಿಎಂನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!