ಶಿವಮೊಗ್ಗ,ಫೆ.14: ಒಂದು ತಲೆಮಾರಿನಷ್ಟು ಕಾಲ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ನವರು ಕೊಟ್ಟ ಹುದ್ದೆಯನ್ನು ಉಳಿಸಿಕೊಳ್ಳಲು ಆಯನೂರು ಮಂಜುನಾಥ್ ಬಿಜೆಪಿ ನಾಯಕರ ಬಗ್ಗೆ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಕೆಸರೆರಾಚಾಟವನ್ನು ಅವರು ನಿಲ್ಲಿಸಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯನೂರು ಮಂಜುನಾಥ್ ಬಿಜೆಪಿಯಿಂದಲೇ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ್ಫರಿಷತ್ಗೆ ಆಯ್ಕೆಯಾಗಿದ್ದಾರೆ. ಕೇವಲ ಕಾಂಗ್ರೆಸ್ನವರು ಅವರನ್ನು ವಕ್ತಾರರನ್ನಾಗಿ ಮಾಡಿದ್ದಾರೆ ಎಂಬ ಕಾರಣಕ್ಕೆ ಹಳೆಯದೆನ್ನೆಲ್ಲ ಮರೆತು ಈಶ್ವರಪ್ಪನಂತವರ ಹಿರಿಯರ ಬಗ್ಗೆ ಮಾತನಾಡಿದ್ದಾರೆ. ಕಪಟ ದೇಶ ಪ್ರೇಮ ಎಂದು ಹೇಳುತ್ತಾರೆ. ದೇಶವನ್ನೇ ಇಬ್ಬಾಗ ಮಾಡಿದ ಕಾಂಗ್ರೆಸ್ನವರಿಂದ ನಾವು ದೇಶ ಪ್ರೇಮವನ್ನು ಕಲಿಯಬೇಕಾಗಿಲ್ಲ ಎಂದರು.
ಆಯನೂರು ಮಂಜುನಾಥ್ ಕಾಂಗ್ರೆಸ್ನವರು ನೀಡಿದ ಹೇಳಿಕೆಗಳನ್ನೇಲ್ಲ ಬಾಯಿ ತಪ್ಪಿನಿಂದ ಆಗಿದೆ ಎಂದು ಹೇಳುತ್ತಾರೆ. ಹಾಗಾದರೆ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಿಗೆ, ಕೇಂದ್ರ ಹಣಕಾಸು ಸಚಿವರಿಗೆ ಮಾತನಾಡಿದ್ದು ಬಾಯಿತಪ್ಪಿನಿಂದಲೇ ? ಡಿ.ಕೆ.ಸುರೇಶ್ ದೇಶವನ್ನೇ ಇಬ್ಬಾಗದ ಬಗ್ಗೆ ಮಾತನಾಡಿದ್ದು ಬಾಯಿ ತಪ್ಪಿನಿಂದಲೇ ? ಇವರೇ ಉತ್ತರ ಹೇಳಬೇಕು ಎಂದರು.
ಅಭಿವೃದ್ಧಿಯ ವಿಚಾರದಲ್ಲಿ ಶಿವಮೊಗ್ಗದಲ್ಲಿ ಏನು ಆಗಿಲ್ಲ ಎಂದು ಹೇಳುವ ಆಯನೂರು ಒಮ್ಮೆ ಶಿವಮೊಗ್ಗವನ್ನು ನೋಡಲಿ. ಬಿಜೆಪಿಯವರ ಆಸ್ತಿ ಇರುವ ಕಡೆ ರೈಲ್ವೆ ಮೇಲ್ಸುತೆವೆ ಆಗಿವೆ ಎಂದು ಆರೋಪ ಮಾಡುತ್ತಾರೆ. ಸವಳಂಗ ರಸ್ತೆಯಲ್ಲಿ ನಮ್ಮ ಅಪ್ಪನ ಆಸ್ತಿ ಯಾವುದು ಇಲ್ಲ ಎಂದು ತಿರುಗೇಟು ನೀಡಿದರು.
ವಿಐಎಸ್ಎಲ್ ಬಗ್ಗೆ ಮಾತನಾಡುವ ಅವರಿಗೆ ನೆನಪಿರಲಿ ರಾಷ್ಟ್ರದ ನಷ್ಟ ಅನುಭವಿಸುತ್ತಿದ್ದ ಹಲವು ಉದ್ಯಮಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಆದರೆ ಸಂಸದನಾಗಿ ನಾನು ವಿಐಎಸ್ಎಲ್ ಉಳಿಸಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ತೀರ ಇತ್ತೀಚೆಗೆ ಅಮಿತ್ಷಾ ಅವರಿಗೆ ಪತ್ರ ಕೂಡ ಬರೆದಿದ್ದೇನೆ. ಅವರು ಲಿಖಿತ ಉತ್ತರ ನೀಡಿ ವಿಐಎಸ್ಎಲ್ನ್ನು ಪುನರ್ಜೀವಗೊಳಿಸಲು ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಖಂಡಿತ ಆಶಾಭಾವನೆ ಇದೆ. ಆದರೆ ಆಯನೂರು ಪತ್ರ ವ್ಯವಹಾರ ನಾಟಕೀಯ ಎಂದು ಕರೆದಿದ್ದಾರೆ. ಅವರಿಗೆ ಮಾಹಿತಿ ಸಾಲದು ಎಂದರು.
ವಿಐಎಸ್ಎಲ್ ಬಗ್ಗೆ ಮಾತನಾಡುವ ಅವರು ಎಂಪಿಎಂ ಕಾರ್ಖಾನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಎಂಪಿಎಂಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್ ಸರ್ಕಾರವಲ್ಲವೇ. ನಾವು ಆ ಕಾರ್ಖಾನೆಯ ಅರಣ್ಯ ಜಮೀನನ್ನು ಮತ್ತೇ 40 ವರ್ಷಗಳ ಕಾಲ ಎಂಪಿಎಂ ಆಡಳಿತಕ್ಕೆ ಬಿಟ್ಟುಕೊಟ್ಟಿದ್ದೇವೆ. ಹೀಗೆ ಅನಗತ್ಯವಾದ ಹೇಳಿಕೆಗಳನ್ನು ಆಯನೂರು ಮಂಜುನಾಥ್ ನೀಡುತ್ತಿದ್ದಾರೆ. ಕೈ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಕಡೆ ಬೆರಳು ತೋರಿಸುವುದನ್ನು ಅವರು ಬಿಡಬೇಕು ಎಂದರು.
ಶರಾವತಿ ಸಂತ್ರಸ್ಥರ ಬಗ್ಗೆ ಮಾತನಾಡುವ ಆಯನೂರಿಗೆ ಕಾಂಗ್ರೆಸ್ ಸರ್ಕಾರ ಅಷ್ಟು ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಅವರು ಏಕೆ ಮಾಡಿಲ್ಲ ಎಂದು ಗೊತ್ತಿಲ್ಲವೇ ? ನಾಲ್ಕು ಸದನಗಳಲ್ಲಿ ಇವರೇ ಇದ್ದರಲ್ಲವೇ ಆಗ ಗೊತ್ತಿರಲಿಲ್ಲವೇ ಅವರು ಬಿಜೆಪಿಯಲ್ಲಿದ್ದಾಗ ಎಂತಹ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದು ಆಧಾರ ಸಹಿತ ಮಾಹಿತಿಗಳಿವೆ ಒಮ್ಮೆ ಅದನ್ನು ನೋಡಲಿ ಶರಾವತಿ ಸಮಸ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಹಾಕಬೇಕಾದದ್ದು ಕಾಂಗ್ರೆಸ್ ಸರ್ಕಾರವಲ್ಲವೇ ಅವರೇಕೆ ಮಾಡಿಲ್ಲ ? ಇಂತಹ ಭಂಟತನದ ಹೇಳಿಕೆಯನ್ನು ಆಯನೂರು ಕೈಬಿಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಜ್ಯೋತಿಪ್ರಕಾಶ್, ರಾಮು, ಶಿವರಾಜು, ಚಂದ್ರಶೇಖರ್, ಹರಿಕೃಷ್ಣ, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.