ಸಾಗರ : ನಾನು ಶಾಸಕನಾಗಿ ಆಯ್ಕೆಯಾಗಿ ಎಂಟು ತಿಂಗಳು ಮಾತ್ರ ಕಳೆದಿದೆ. ಅಷ್ಟರೊಳಗೆ ಎರಡನೇ ವಾರ್ಡ್ ಅಭಿವೃದ್ದಿಗೆ ೧.೬೬ ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ಎರಡನೇ ವಾರ್ಡ್‌ನಲ್ಲಿ ನಗರಸಭೆ ವತಿಯಿಂದ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಈಗಾಗಲೆ ನಗರ ಪ್ರದೇಶದಲ್ಲಿ ರಸ್ತೆ, ಚರಂಡಿ, ಪಾರ್ಕ್ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಸುಮಾರು ೨೦ ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದರು.


ನಗರಸಭೆ ವ್ಯಾಪ್ತಿಯಲ್ಲಿರುವ ೩೧ ವಾರ್ಡ್‌ಗಳಲ್ಲೂ ಉದ್ಯಾನವನ ಮತ್ತು ರಂಗಮಂದಿರ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ೨೦೦೪ ಮತ್ತು ೨೦೦೮ರಲ್ಲಿ ನಾನು ಎರಡು ಬಾರಿ ಶಾಸಕನಾಗಿದ್ದಾಗಲೂ ಉದ್ಯಾನವನ ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸಲಾಗಿತ್ತು. ನಂತರ ಬಂದವರು ಉದ್ಯಾನವನ ಹೇಗೆ ನಿರ್ವಹಣೆ ಮಾಡಿದ್ದಾರೆ ಎನ್ನುವುದು ನಿಮ್ಮ ಕಣ್ಣಮುಂದೆ ಇದೆ. ಉದ್ಯಾನವನ ಇದ್ದರೆ ಮಕ್ಕಳು ಮತ್ತು ಹಿರಿಯರು ಸಂಜೆ ಹೊತ್ತು ಸಮಯ ಕಳೆಯಲು ಅವಕಾಶವಾಗುತ್ತದೆ. ಇದರ ಜೊತೆಗೆ ಸಭಾಭವನ ನಿರ್ಮಿಸಿ ಬಡವರ ಮದುವೆ, ಶುಭ ಕಾರ್ಯಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.


ನೆಹರೂ ಮೈದಾನದಲ್ಲಿ ಅತಿಹೆಚ್ಚು ಕ್ರೀಡೆ ಇನ್ನಿತರೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಲ್ಲೊಂದು ಸುಸಜ್ಜಿತ ರಂಗಮಂದಿರ ಬೇಕು ಎನ್ನುವುದು ಬಹುಜನರ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಲಾಗುತ್ತಿದೆ. ಜೊತೆಗೆ ಶೌಚಾಲಯ, ಗ್ರೀನ್ ರೂಮ್ ಸಹ ನಿರ್ಮಿಸುತ್ತೇವೆ. ಒಟ್ಟಾರೆ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ನಾಗರತ್ನ, ಪ್ರಮುಖರಾದ ಐ.ಎನ್.ಸುರೇಶಬಾಬು, ಕೆ.ಸಿದ್ದಪ್ಪ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!