ಶಿವಮೊಗ್ಗ,ಜ.09: ನಗರದ 31ನೇ ವಾರ್ಡಿನ ಮಿಷನ್ ಕಾಪೌಂಡ್ನಲ್ಲಿರುವ ಸಂತ ಥಾಮಸ್ ಚರ್ಚ್ನ ಜಾಗವನ್ನು ಜಿಲ್ಲಾಡಳಿತ ಕಬಳಿಸಲು ಯತ್ನಿಸುತ್ತಿದೆ ಎಂದು ಸಂತ ಥಾಮಸ್ ಚರ್ಚ್ನ ಸಂಚಾಲಕ ಬಿ.ಏಸುದಾಸ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಡಳಿತವು ಕ್ರೈಸ್ತ ಸಮುದಾಯದ ಸಿ.ಎಸ್.ಐ.ಟಿ.ಎ.ಗೆ ಸೇರಿದ ಜಾಗವನ್ನು ಕಾನೂನು ಬಾಹಿರವಾಗಿ ಮತ್ತು ಆತುರವಾಗಿ ಕಬಳಿಸುವ ತಂತ್ರವನ್ನು ಅನುಸರಿಸಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ ಈ ಜಾಗವನ್ನು ಶಿವಮೊಗ್ಗ ವೈದ್ಯಕೀಯ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ಈ ಜಾಗ ನಮ್ಮದು ಎಂಬುವುದಕ್ಕೆ ನಮ್ಮಲ್ಲಿ ದಾಖಲಿಗಳಿವೆ. ಈಗಾಗಲೇ ನಮ್ಮ ಹೆಸರಿನಲ್ಲಿ ಜಾಗವಿದೆ. ಇದಕ್ಕೆ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಈಗ ನ್ಯಾಯಾಲಯದಲ್ಲಿ ಇದೆ ಎಂದರು.
ಜಿಲ್ಲಾಧಿಕಾರಿಗಳು ಗ್ರಾಮಠಾಣಾದಲ್ಲಿ ಖಾಲಿ ಇರುವ 2.35 ಎಕರೆ ಪ್ರದೇಶವನ್ನು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಮಂಜೂರು ಮಾಡುವಂತೆ ಆಯುಕ್ತರಿಗೆ ತಿಳಿಸಿದ್ದಾರೆ. ಆಯುಕ್ತರು ಕೂಡ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರ ಮಾಡುವಂತೆ ಪ್ರಾಸ್ತಾವನೆ ಕಳಿಸಿದ್ದಾರೆ. ಜಿಲ್ಲಾಧಿಕಾರಿಗಳು ನಿಯಮಗಳನ್ನು ಮೀರಿ ಸಿಮ್ಸ್ಗೆ ಇದನ್ನು ಹಸ್ತಾಂತರ ಮಾಡಿದ್ದಾರೆ ಎಂದರು.
ಕ್ರೈಸ್ತ ಸಮುದಾಯದ ಕಲ್ಯಾಣಕ್ಕಾಗಿಯೇ 1881ರಿಂದ ಇಲ್ಲಿಯವರೆಗೆ ಇದನ್ನು ಹಂತ ಹಂತವಾಗಿ ಜನೋಪಯೋಗಿ ಕೆಲಸಕ್ಕಾಗಿ ಉಪಯೋಗಿಸಲಾಗುತ್ತಿದೆ. ನಿವೇಶನಗಳನ್ನು ಮಾಡಿ, ಒಟ್ಟು ಪ್ರದೇಶದ ಅರ್ಧಭಾಗವನ್ನು ಸಮುದಾಯದ ಸದಸ್ಯರಿಗೆ ನೀಡಲಾಗಿದೆ. ಆದರೆ ಈಗ ಈ ಜಾಗದಲ್ಲಿನ 2.35 ಎಕರೆ ಸ್ಥಳವನ್ನು ಖುಲ್ಲಾ ಜಾಗವೆಂದು ಪ್ರಗಣಿಸಿ ಸಿಮ್ಸ್ಗೆ ನೀಡಿರುವುದು. ಕಾನೂನು ಬಾಹಿರವಾಗಿದೆ ಮತ್ತು ನ್ಯಾಯಾಲಯದಲ್ಲಿ ದಾವೆ ಇರುವಾಗಲೇ ಇದನ್ನು ಹಸ್ತಾಂತರ ಮಾಡುವುದು. ಆ ಜಾಗದಲ್ಲಿ ಕ್ಯಾನ್ಸ್ರ್ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡುವುದು, ಕಾನೂನಿಗೆ ವಿರೋಧವಾಗಿದೆ. ಅಲ್ಲದೇ ಈ ಸ್ಥಳವು ಕ್ಯಾನ್ಸರ್ ಆಸ್ಪತ್ರೆಗೆ ಯೋಗ್ಯವು ಆಗಿಲ್ಲ ಎಂದರು.
ಆದ್ದರಿಂದ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ವಿರುದ್ಧ ಜ.11ರಂದು ಸಂತ ಥಾಮಸ್ ದೇವಾಲಯದ ಸಭಾ ಸದಸ್ಯರು ಕ್ರೈಸ್ತ ಸಮುದಾಯಗಳ ವೇದಿಕೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೆಳಿಗ್ಗೆ 10ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಧರ್ಮ ಗುರು ಪೌಲ್ ಎಫ್. ಶಿಂಧೆ, ಡಿ.ಸಿ.ಫೀಟರ್, ಜ್ಯೋತಿ ಅರಳಪ್ಪ, ರಾಬರ್ಟ್ ಮುಂತಾದವರು ಇದ್ದರು.