ಶಿವಮೊಗ್ಗ,ಜ.೦೮: ಡಿಜಿಟಲ್ ತಂತ್ರಜ್ಞಾನದಿಂದಾಗಿ ಸಾಂಪ್ರದಾಯಿಕ ಮುದ್ರಣಕ್ಕೆ ಭಾರೀ ಹಿನ್ನಡೆಯಾಗಿದ್ದು, ಈ ಉದ್ಯಮ ಉಳಿಸುವ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಬೇಕಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ, ಲೆಕ್ಕಪರಿಶೋಧಕ ಕೆ.ವಿ. ವಸಂತ ಕುಮಾರ್ ಹೇಳಿದರು.
ಮಲೆನಾಡು ಮುದ್ರಕರ ಸಂಘದ ವತಿಯಿಂದ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮುದ್ರಕರ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗಿದೆ. ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾದವರು ಮಾತ್ರ ಬೆಳೆಯುವಂತಾಗಿದೆ ಎಂದರು.
ಜಾನ್ ಹಿಡನ್ ಬರ್ಗ್ ಮುದ್ರಣ ಯಂತ್ರ ಕಂಡು ಹಿಡಿದ ಬಳಿಕ ವಿಶ್ವದಲ್ಲಿಯೇ ದೊಡ್ಡ ಬದಲಾವಣನೆಗೆ ಕಾರಣವಾಗಿತ್ತು. ಇಂದು ಆ ತಂತ್ರಜ್ಞಾನ ತೀರಾ ಹಳೆಯದಾಗಿದೆ. ತಂತ್ರಜ್ಞಾನ ಬೆಳೆದಂತೆ ಕೆಲಸವೂ ಸುಲಭವಾಗುತ್ತಿದೆ. ಆದರೆ ವೆಚ್ಚದ ಪ್ರಮಾಣ ಹೆಚ್ಚಾಗುತ್ತಿದೆ. ಒಂದು ಉದ್ಯಮದವರು ಒಟ್ಟಿಗೆ ಸೇರಿ ಇಂತಹ ಹಬ್ಭ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಪುರುಷರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪ್ರೊ. ಕೆ.ಜಿ.ವೆಂಕಟೇಶ್, ನಾನು ಸಹ ಮುದ್ರಣ ಕಚೇರಿಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ಕಷ್ಟಗಳೇನೆಂಬುದು ಗೊತ್ತಿದೆ. ಅಂತಹ ಕಷ್ಟಗಳನ್ನು ಒಂದು ದಿನದಮಟ್ಟಿಗಾದರೂ ಮರೆಯಲು ಇಂತ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್‌ರಾಜ್, ಮಾತನಾಡಿ, ಮುದ್ರಣ ಕಲೆಗೆ ಐದು ಸಾವಿರ ವರ್ಷಗಳನ್ನು ಇತಿಹಾಸವಿದೆ. ಮೊದಲು ಜೇಡಿ ಮಣ್ಣಿನ ಹಲಗೆಯ ಮೇಲೆ ಬರೆದ ದಾಖಲೆ ಸುಮೇರಿಯನ್ ಸಂಸ್ಕೃತಿಯಲ್ಲಿ ದೊರೆತಿದೆ ಎಂದರು.
ಹಿರಿಯ ಪತ್ರಕರ್ತ, ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕ ಎಸ್.ಚಂದ್ರಕಾಂತ್‌ರವರು ಮಾತನಾಡಿ, ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡು, ದರ ಪೈಟೋಟಿ ನಡೆಸದೆ ಮುದ್ರಣಕಾರರು ಒಗ್ಗಟ್ಟಿನಿಂದ ಏಕರೂಪದ ದರ ನಿಗದಿಪಡಿಸಿಕೊಂಡು ವ್ಯವಹರಿಸಬೇಕು ಎಂದರು.
ಮಲೆನಾಡು ಮುದ್ರಕ ಸಂಘದ ಅಧ್ಯಕ್ಷ ಎಂ. ಮಾಧವಾಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಮುದ್ರಣಕಾರರಿಗೆ, ಹಿರಿಯ ಮುದ್ರಣ ಕಾರ್ಮಿಕರಿಗೆ, ರಕ್ತದಾನಿ ಮುದ್ರಣಕಾರರಿಗೆ ಹಾಗೂ ಮುದ್ರಣಕಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೇರವೇರಿಸಿದರು.
ವೇದಿಕೆಯಲ್ಲಿ ಮುದ್ರಣಕಾರರ ಸಂಘದ ರಾಜ್ಯ ವಲಯ ಸಂಚಾಲಕರಾದ ಕೆ.ಆರ್. ಚಂದ್ರಪ್ಪ, ಹಾಸನ ಮುದ್ರಕ ಸಂಘದ ಶ್ರೀ ಕಿರಣ್ ಗೌಡ ಕಿರಗಡಲು, ಬೆಂಗಳೂರಿನ ಸ್ಮಿತ್ ಗ್ರಾಫಿಕ್ಸ್ ಲಿಂಕ್‌ನ ಬಿ.ವಿ.ಮೋಹನ್, ಸಂಘದ ಅಧ್ಯಕ್ಷ ಮಾಧವಾಚಾರ್,ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತ ನಾಗರತ್ನ ಶಂಕರ್, ಜ್ಯೂನಿಯರ್ ಪುನೀತ್ ರಾಜಕುಮಾರ್, ಪ್ರಧಾನ ಕಾರ್ಯರ್ಶಿ ಗಣೇಶ ಬೀಳಗಿ, ಆ.ನ.ವಿಜೇಂದ್ರರಾವ್ ಇದ್ದರು.
ಬೆಂಗಳೂರಿನ ಸವಿಗಾನ ತಂಡದಿಂದ ‘ಮೆಲ್ಲುಸಿರೇ ಸವಿಗಾನ’ ಎಂಬ ವಿಶೇಷ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ಏರ್ಪಾಡಾಗಿತ್ತು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಸವಿಗಾನ ತಂಡದವರಿಂದ ಮೆಲ್ಲುಸಿರೇ ಸವಿಗಾನ-ಕನ್ನಡ ಹಳೆಯ ಚಿತ್ರಗೀತೆಗಳ ಸುಮಧುರ ಗಾಯನ ಕಾರ್ಯಕ್ರಮ ನಡೆಯಿತು.