ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಸಾಹಿತಿ ಡಾ. ಹೆಚ್.ಟಿ. ಕೃಷ್ಣಮೂರ್ತಿ

ಶಿವಮೊಗ್ಗ,ನ.30 :

ಕೆಲವೇ ಭಾಷೆಗಳು ಶ್ರೇಷ್ಠ ಎಂಬ ಅಂಧತ್ವ ಬೇಡ. ಪ್ರತಿಯೊಂದು ಭಾಷೆಯು ನಮ್ಮ ಅರಿವಿನ ಭಾಷೆ ಎಂದು ಸಾಹಿತಿ ಡಾ. ಹೆಚ್.ಟಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಕಾಲೇಜಿನ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದು ನಮ್ಮ ಪ್ರಕೃತಿ, ಸಂಸ್ಕೃತಿ, ನಮ್ಮಯ ಅರಿವು. ಇಡೀ ದೇಶದಲ್ಲಿ ಮೊಟ್ಟ ಮೊದಲ ಅಕ್ಷರ ಸಮಾಜ ಕರ್ನಾಟಕ. ಸಂಸ್ಕೃತವನ್ನು ಕನ್ನಡದ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಹಾಗಾಗಿಯೇ ಕನ್ನಡದ ಲಿಪಿಯನ್ನು ಲಿಪಿಗಳ ರಾಣಿ ಎಂದು ಬಣ್ಣಿಸಲಾಗಿದೆ. ಅಂತಹ ಬಹುದೊಡ್ಡ ಅರಿವಿನ ಭಾಷೆ ನಮ್ಮ ಕನ್ನಡ.
ಹೇಳಿದಂತೆ ಬರೆಯಬಹುದಾದ ಶಕ್ತಿಯಿರುವುದು ಕನ್ನಡ ಭಾಷೆ. ಚಿರಂಜೀವಿ ಸಿಂಗ್ ಎಂಬ ಪಂಜಾಬಿನ ಮೂಲದ ಅಧಿಕಾರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದಾರೆ. ಅವರು ಬರೆದ ಯಾವ ಜನ್ಮದ ಮೈತ್ರಿಯೊ ಎಂಬ ಪುಸ್ತಕದಲ್ಲಿ ನಿಮ್ಮ ಭಾಷೆಯನ್ನು ನೀವು ಪ್ರೀತಿಸುವುದನ್ನು ಕಲಿಯಿರಿ ಎಂದು ಕನ್ನಡಿಗರಿಗೆ ಸಲಹೆ ನೀಡಿದ್ದಾರೆ.


ನಾವು ಆಡುವ ಭಾಷೆಗಳು ಪ್ರಾರಂಭಗೊಂಡು ಒಂದು ಲಕ್ಷ ವರ್ಷ ಇತಿಹಾಸವಿದೆ. ಅಂತಹ ಇತಿಹಾಸವನ್ನು ಯುವ ಸಮೂಹ ಅಧ್ಯಯನ ಮಾಡಬೇಕಿದೆ. ಶಬ್ದ ಮತ್ತು ಸಂಸ್ಕೃತಿಯ ಮಾಲಿನ್ಯವೇ ಉತ್ಸವವೆಂಬ ತಪ್ಪು ಕಲ್ಪನೆ ಬೇಡ. ರಾಜ್ಯೋತ್ಸವದ‌ ಮೂಲ ಆಶಯ ಅರಿತು ಸಂಸ್ಕೃತಿ ಸಂಸ್ಕಾರವಂತ ಆಚರಣೆಗಳು ಹೆಚ್ಚಾಗಬೇಕಿದೆ.
ಕರ್ನಾಟಕದಲ್ಲಿಯೇ ಇರುವ ಇಸ್ರೋದಂತಹ ಸಂಸ್ಥೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಿರುವುದು ಬೇಸರದ ಸಂಗತಿ. ಕನ್ನಡದ ಕೆಲಸಗಳು ಹೆಚ್ಚಾಗಿ ಹೊರಗೆ ಕಾಣಬೇಕಿದೆ. ಅಂಜಿಕೆ ಹಿಂಜರಿಕೆಗಳಿಂದ ಹೊರಬಂದು ಕನ್ನಡದ ಉತ್ತಮ ಸಾಧಕರು ನೀವಾಗಿ ಎಂದು ಹಾರೈಸಿದರು.


ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಕನ್ನಡ ಉತ್ಕೃಷ್ಟ ಭಾಷೆ. ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಕೇವಲ ನವೆಂಬರ್ ಮಾತ್ರಕ್ಕೆ ಕನ್ನಡದ ಉತ್ಸವ ನಡೆಯದೇ ಬದುಕಿನುದ್ದಕ್ಕು ಕನ್ನಡದ ಸಂಭ್ರಮ ನಿತ್ಯುಳ್ಳ ಜ್ಯೋತಿಯಾಗಿ ಬೆಳಗುತಿರಲಿ ಎಂದು ಹೇಳಿದರು.
ಎನ್ಇಎಸ್ ಖಜಾಂಚಿಗಳಾದ ಡಿ.ಜಿ.ರಮೇಶ್ ಮಾತನಾಡಿ, ವಿಭಿನ್ನ ಬಗೆಯ ಸಂಸ್ಕೃತಿ ವೈವಿಧ್ಯತೆ ಮೂಲಕ ಕನ್ನಡ ಭಾಷೆ ಶ್ರೀಮಂತಗೊಂಡಿದೆ. ವ್ಯಕ್ತಿತ್ವ ಸಂವರ್ಧನೆಗೆ ಪಠ್ಯ ಮತ್ತು ಪಠ್ಯೇತರ ಬಹುದೊಡ್ಡ ಭಾಗಗಳಾಗಿದ್ದು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಬಿ‌.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಪ್ರಣಮ್ಯ ಸ್ವಾಗತಿಸಿದರೆ ವರ್ಷ ವಂದಿಸಿದರು. ಛಾಯಾ ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!