ಶಿವಮೊಗ್ಗ: ಶೈಕ್ಷಣಿಕ ತರಗತಿಗಳನ್ನು ನಡೆಸುವಂತೆ ಆಗ್ರಹಿಸಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಇಂದು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು.
೨೦೨೩-೨೪ನೇ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ಶೈಕ್ಷಣಿಕ ತರಗತಿಗಳು ಆರಂಭವಾಗಿಲ್ಲ. ಸೆ.೧೯ರಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆರಂಭವಾಗಲಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಅಧ್ಯಾಪಕರು ಮೌಲ್ಯಮಾಪನಕ್ಕೆ ತೆರಳಿದ್ದು, ನಂತರ ತರಗತಿ ಆರಂಭಿಸಲಾಗುವುದು ಎಂಬ ಭರವಸೆ ನೀಡಿ ಎರಡು ತಿಂಗಳಾದರೂ ಇನ್ನೂ ತರಗತಿಗಳು ಆರಂಭವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಅ.೫ರಿಂದ ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಗಳು ಆರಂಭವಾಗಿವೆ. ಆದರೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ದೀಪಾವಳಿ, ದಸರಾ ಹಬ್ಬದ ನೆಪವೊಡ್ಡಲಾಗಿದೆ. ಈಗ ಅತಿಥಿ ಉಪನ್ಯಾಸಕರಿಲ್ಲ ಎಂಬ ಕಾರಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಲೇಜಿಗೆ ಸುತ್ತಮತ್ತಲ ಹಳ್ಳಿಗಳಿಂದ, ಹಾಸ್ಟೆಲ್‌ಗಳಿಂದ ಪ್ರತಿದಿನ ನೂರಾರು ರೂ. ಬಸ್ ಚಾರ್ಜ್ ಕೊಟ್ಟು ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿ ತರಗತಿಗಳೇ ನಡೆಯಲಿಲ್ಲ ಎಂದರೆ ಹೇಗೆ. ಕಾಲೇಜಿನಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ವಾರಕ್ಕೆ ೨೪೦೦ ಗಂಟೆ ತರಗತಿಗಳು ನಡೆಯಬೇಕಿದೆ. ಹೀಗಾದರೆ ನಾವು ಓದುವುದು ಹೇಗೆ, ಪರೀಕ್ಷೆ ಬರೆಯುವುದು ಹೇಗೆ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ನಂತರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿದ್ಯಾರ್ಥಿಗಳ ಮುಷ್ಕರಕ್ಕೆ ವಕೀಲ ಕೆ.ಪಿ. ಶ್ರೀಪಾಲ್, ಹಳೆಯ ವಿದ್ಯಾರ್ಥಿ ಅ.ನ. ವಿಜಯೇಂದ್ರ, ಡಿಎಸ್‌ಎಸ್ ಮುಖಂಡ ಎಂ. ಗುರುಮೂರ್ತಿ ಮುಂತಾದವರು ಬೆಂಬಲ ನೀಡಿದರು