ಸಾಗರ : ನೂತನ ಮಿನಿ ವಿಧಾನ ಸೌಧ ಸುಮಾರು ೧೬ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಮಿನಿ ವಿಧಾನಸೌಧ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ನೂತನ ಮಿನಿ ವಿಧಾನಸೌಧವನ್ನು ಉದ್ಘಾಟಿಸಲು ಸಚಿವರನ್ನು ಆಹ್ವಾನಿಸಲಾಗಿದ್ದು, ವಿಧಾನಸಭೆ ಅಧಿವೇಶನ ನಂತರ ಲೋಕಾರ್ಪಣೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು.
ಈಗಾಗಲೆ ೮.೫೦ ಕೋಟಿ ರೂ. ಹಣ ಖರ್ಚಾಗಿದ್ದು, ೨.೧೫ ಕೋಟಿ ರೂ. ಹಣ ಬರಬೇಕಾಗಿದೆ. ಮೂರನೆ ಅಂತಸ್ತು ಮತ್ತು ಮೇಲ್ಚಾವಣಿ ನಿರ್ಮಾಣಕ್ಕೆ ೫.೨೦ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು
ಶೀಘ್ರದಲ್ಲಿಯೆ ಹಣ ಬಿಡುಗಡೆಯಾಗುತ್ತದೆ. ಸಬ್ ರಿಜಿಸ್ಟ್ರಾರ್ ಕಚೇರಿ ಹೊರತುಪಡಿಸಿ ಎಲ್ಲಾ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಬರುತ್ತದೆ. ಮಿನಿ ವಿಧಾನಸೌಧ ಪಕ್ಕದಲ್ಲಿಯೆ ಸುಮಾರು ೪ ಕೋಟಿ ರೂ. ವೆಚ್ಚದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ನಿರ್ಮಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹಣ ಸಹ ಕಾಯ್ದಿರಿಸಲಾಗಿದೆ. ಶಾಸಕರ ಕಚೇರಿ ಸಹ ಮಿನಿ ವಿಧಾನಸೌಧದಲ್ಲಿಯೆ ಇರುತ್ತದೆ ಎಂದರು.
ಅಭಿವೃದ್ದಿ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಇಲ್ಲ. ಸಾಗರ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಹಣವನ್ನು ಮಂಜೂರು ಮಾಡಲು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ನಗರೋತ್ಥಾನ ಯೋಜನೆಯಡಿ ಅನುದಾನ ಬಂದಿದ್ದು ಅದನ್ನು ಸದ್ಭಳಕೆ ಮಾಡಿಕೊಳ್ಳಲಾಗುತ್ತದೆ. ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರದ ಜನರ ನಿರೀಕ್ಷೆಗೆ ಮೀರಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.
ನಿಗಮ ಮಂಡಳಿ ಕೇಳಿಲ್ಲ : ನಾನು ನಿಗಮ ಮಂಡಳಿ ಆಕಾಂಕ್ಷಿಯಲ್ಲ. ಭದ್ರಾವತಿ ಶಾಸಕ ಸಂಗಮೇಶ್ ಬಿ.ಕೆ. ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದನ್ನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನ ಸಿಗುವ ನಿರೀಕ್ಷೆ ಇದೆ. ಜಾತಿಗಣತಿ ಸಮೀಕ್ಷೆ ವರದಿ ಅನುಷ್ಟಾನಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದವಾಗಿದ್ದೇನೆ. ನನ್ನ ಅಭಿವೃದ್ದಿ ವೇಗಕ್ಕೆ ಅಡ್ಡಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಉಪ ತಹಶೀಲ್ದಾರ್ ಕಲ್ಲಪ್ಪ ಮೆಣಸಿನಾಳ್, ಪ್ರಮುಖರಾದ ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಸುರೇಶಬಾಬು, ಬಸವರಾಜ್ ಕುಗ್ವೆ, ನಾಗರಾಜ ಗುಡ್ಡೆಮನೆ ಇನ್ನಿತರರು ಹಾಜರಿದ್ದರು.