ಶಿವಮೊಗ್ಗ: ಸಂವಿಧಾನಕ್ಕೆ ಅವಮಾನ ಮಾಡಿದ ರಾಷ್ಟ್ರದ್ರೋಹಿ ಸಚಿವ ಜಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಸ್ಪೀಕರ್ ಸ್ಥಾನ ನೀಡಿದ್ದು, ಈಗಿರುವ ಸ್ಪೀಕರ್ ಅವರಿಗೆ ಎಲ್ಲಾ ಶಾಸಕರು ತಲೆಬಾಗಿ ನಮಸ್ಕರಿಸಬೇಕು ಎಂದು ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿರುವುದಕ್ಕೆ ತೀವ್ರವಾಗಿ ಖಂಡಿಸುತ್ತೇನೆ ಎಂದರು.


ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೊ ಅಥವಾ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯೋ ಎಂಬುದರ ಬಗ್ಗೆ ಸಿಎಂ ಹೇಳಿಕೆ ನೀಡಬೇಕು ಎಂದರು.
ಸ್ಪೀಕರ್‌ಗೆ ಎಲ್ಲರೂ ಗೌರವ ಕೊಡಬೇಕು. ಅದೊಂದು ಸಂವಿಧಾನಬದ್ಧ ಸ್ಥಾನವಾಗಿದೆ. ಆ ವ್ಯಕ್ತಿ ಹಿಂದುವೇ ಆಗಿರಲಿ, ಮುಸಲ್ಮಾನನಾಗಿರಲಿ ಆ ಸ್ಥಾನಕ್ಕೆ ಎಲ್ಲರೂ ಗೌರವ ಕೊಡಬೇಕಾಗುತ್ತದೆ. ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಇದುವರೆಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ, ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ತಪ್ಪೋ ಸರಿಯೋ ಎಂದು ಸ್ಪಷ್ಟಪಡಿಸಲಿಲ್ಲ ಎಂದರು.


ಇಂತಹ ಹೇಳಿಕೆಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದರ ಮೂಲಕ ಸಂವಿಧಾನ ಒಪ್ಪುವಂತಹ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದರು.


ಬೆಂಗಳೂರಿನ ಸಯ್ಯದ್ ನಗರದಲ್ಲಿರುವ ಮುಸ್ಲಿಂ ಅನಾಥಾಲಯದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಕ್ಕಳಿಗೆ ತಾಲಿಬಾನ್ ಶಿಕ್ಷಣ ನೀಡಲಾಗುತ್ತಿದೆ ಎಂಬ ವರದಿಯಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿ ಅಲ್ಲಿ ನಡೆಯುತ್ತಿರುವ ಶಿಕ್ಷಣದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಅನಾಥಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀಡಲು ಸೂಚಿಸಬೇಕು ಎಂದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರ ಹಲೋ ಅಪ್ಪಾ.. ವೀಡಿಯೋ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಈ ತನಿಖೆಗೆ ಬೇಕಾಗುವ ದಾಖಲೆಗಳನ್ನು ಬಿಜೆಪಿ ನೀಡಲು ಸಿದ್ದವಿದೆ ಎಂದ ಅವರು, ಕಾಂತರಾಜ್ ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಹಾಕದಿರುವುದರಿಂದ ವರದಿ ಜಾರಿಗೆ ತೊಡಕಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಕೂಡಲೇ ಈ ವರದಿಯನ್ನು ಬಹಿರಂಗಪಡಿಸಿ ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ಶಿವರಾಜ್, ಕೆ.ವಿ ಅಣ್ಣಪ್ಪ, ಚಂದ್ರಶೇಖರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!