ಸಾಗರ : ನಗರ ಬಿಜೆಪಿ ಮಂಡಲ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನಿಯುಕ್ತಿಗೊಂಡಿರುವ ಹಿನ್ನೆಲೆಯಲ್ಲಿ ಸಾಗರ ಹೋಟೆಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ಯದ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ವಿಜಯೇಂದ್ರ ಯಡಿಯೂರಪ್ಪ ಅವರ ಪುತ್ರ ಎನ್ನುವುದಕ್ಕಿಂತ ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಬಿಜೆಪಿಗೆ ನೆಲೆ ಇಲ್ಲದ ಅನೇಕ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ತಮ್ಮದೇ ಸಂಘಟನಾ ಚತುರತೆ ತೋರಿಸಿದ್ದಾರೆ.

ಕೊರೋನಾ ಸಂದರ್ಭದಲ್ಲಿ ತಮ್ಮದೆ ಪ್ರತಿಷ್ಟಾನದ ಮೂಲಕ ರೋಗಿಗಳಿಗೆ ಉಚಿತ ಮಾತ್ರೆ ಔಷಧಿಗಳನ್ನು ವಿತರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಪಕ್ಷ ಸಂಘಟನೆ ಜೊತೆ ಸಾಮಾಜಿಕ ಕಳಕಳಿ ಇರುವ ವಿಜಯೇಂದ್ರ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಲಿದೆ ಎಂದರು.


ರಾಜ್ಯದಲ್ಲಿ ಭೀಕರ ಬರ ಇದ್ದರೂ ಕಾಂಗ್ರೇಸ್ ಪಕ್ಷ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಗೆ ಬಿದ್ದಿದೆ. ಅಧಿಕಾರ ಉಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವ ಕಾಂಗ್ರೇಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚುಂತೆ ಮಾಡಲು ಪಕ್ಷವು ಈಗಾಗಲೆ ಸನ್ನದ್ದವಾಗಿದೆ. ಸ್ಥಳೀಯ ಶಾಸಕ ಬೇಳೂರಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಯಾರು ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಒಂದು ರೂಪಾಯಿ ಅನುದಾನ ತರದ ಶಾಸಕರು ಹಾಲಪ್ಪ ಶಾಸಕರಾಗಿದ್ದ ಅವಧಿಯಲ್ಲಿ ತಂದು ಅನುದಾನದ ಶಂಕುಸ್ಥಾಪನೆ ನೆರವೇರಿಸುವಲ್ಲಿಯೆ ಬಿಜಿಯಾಗಿದ್ದಾರೆ ಎಂದು ಹೇಳಿದರು.


ನಗರಸಭಾ ನಿಕಟಪೂರ್ವ ಅಧ್ಯಕ್ಷೆ ಮಧುರಾ ಶಿವಾನಂದ್, ಸದಸ್ಯ ಆರ್. ಶ್ರೀನಿವಾಸ್ ಮೇಸ್ತ್ರಿ, ವಿ.ಮಹೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಸವಿತಾ ವಾಸು, ಮೈತ್ರಿ ಪಾಟೀಲ್, ಅರವಿಂದ ರಾಯ್ಕರ್, ಸತೀಶ್ ಕೆ., ಸತೀಶ್ ಬಾಬು, ಭಾವನಾ ಸಂತೋಷ್, ರವೀಂದ್ರ ಬಿ.ಟಿ., ಕೃಷ್ಣ ಶೇಟ್, ಬಿ.ಎಚ್.ಲಿಂಗರಾಜ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!