ಸಾಗರ : ಸರ್ಕಾರಿ ಭೂಮಿ ಒತ್ತುವರಿ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಿ. ಒತ್ತುವರಿಯನ್ನು ನಿರ್ಧಾಕ್ಷಣ್ಯವಾಗಿ ತೆರವುಗೊಳಿಸಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.


ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒತ್ತುವರಿದಾರರಿಗೆ ನೋಟಿಸ್ ಕೊಡದೆ ಮೀನಾಮೇಷ ಎಣಿಸಿದರೆ ಅಂತಹ ಅಧಿಕಾರಿ ವಿರುದ್ದ ತಕ್ಷಣ ಕ್ರಮಗೊಳ್ಳಿ ಎಂದು ತಹಶೀಲ್ದಾರ್‌ಗೆ ಸೂಚನೆ ನೀಡಿದರು.


ತಾಲ್ಲೂಕಿನ ಬೇರೆಬೇರೆ ಭಾಗಗಳಲ್ಲಿ ಒತ್ತುವರಿ ಪ್ರಕರಣ ಹೆಚ್ಚುತ್ತಿದೆ. ಕಂದಾಯ ಇಲಾಖೆ ಭೂಮಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಈಗಾಗಲೆ ಆಶ್ರಯ ನಿವೇಶನ, ಕೈಗಾರಿಕಾ ಉದ್ದೇಶಕ್ಕೆ ಭೂಮಿ ಕಾಯ್ದಿರಿಸುವ ಚಿಂತನೆ ನಡೆಸಲಾಗಿದೆ.

ಇಂತಹ ಹೊತ್ತಿನಲ್ಲಿ ಇರುವ ಭೂಮಿಯನ್ನು ಒತ್ತುವರಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಬೇಳೂರು, ೯೪ಸಿ ಮತ್ತು ೯೪ಸಿಸಿ ಅಡಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ತಕ್ಷಣ ಕಾರ್ಯಕ್ರಮ ರೂಪಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೋ ಅಂತಹವರು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಹೇಳಿದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆಹಾನಿ ಬಗ್ಗೆ ನಿಖರವಾದ ವರದಿಯನ್ನು ತಯಾರಿಸಬೇಕು.

ತಾಲ್ಲೂಕನ್ನು ಸಂಪೂರ್ಣ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು ಎಷ್ಟು ಹಾನಿಯಾಗಿದೆ ಎನ್ನುವ ಬಗ್ಗೆ ತಕ್ಷಣ ವರದಿ ಕೊಡಿ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟೀ ಸರ್ವೇ ಮಾಡಬೇಕು. ಬೆಳೆಹಾನಿಗೊಳಗಾದ ಯಾವುದೇ ರೈತರಿಗೆ ಅನ್ಯಾಯವಾಗಬಾರದು ಎಂದು ತಿಳಿಸಿದರು.


ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ವಿಭಾಗದ ಅಧಿಕಾರಿಗಳು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!