ಸಾಗರ : ಐಟಿಬಿಟಿಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ. ೧೦ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ನಮ್ಮ ನೆಲ, ಜಲ, ಸಂಪನ್ಮೂಲ ಬಳಸಿಕೊಂಡು ಅನ್ಯರಾಜ್ಯದವರಿಗೆ ಉದ್ಯೋಗ ನೀಡುವ ಕ್ರಮ ಸರಿಯಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.


ಇಲ್ಲಿನ ನೆಹರೂ ಮೈದಾನದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಕನ್ನಡ ನಾಡಿನ ಯುವಕರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಯಾವುದೇ ಹಂತದಲ್ಲಿ ಕನ್ನಡಿಗರಿಗೆ, ನೆಲಜಲಭಾಷೆಗೆ ಅನ್ಯಾಯವಾದರೆ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.


ಕರ್ನಾಟಕಕ್ಕೆ ೫೦ರ ಸಂಭ್ರಮ ಅತ್ಯಂತ ವೈಭವದಿಂದ ರಾಜ್ಯ ಮಾತ್ರವಲ್ಲದೇ ದೇಶವಿದೇಶದಲ್ಲೂ ಆಚರಿಸಲಾಗುತ್ತಿದೆ. ಕನ್ನಡಿಗರಾದ ನಾವು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಕನ್ನಡ ನೆಲ ಜಲ ಭಾಷೆಗೆ ಆತಂಕ ಎದುರಾದಾಗ ಎಲ್ಲರೂ ಒಟ್ಟಾಗಿ

ಪ್ರತಿರೋಧಿಸುವ ಕೆಲಸ ಮಾಡಬೇಕಾಗಿದೆ. ಗಡಿ ಭಾಗಗಳಲ್ಲಿ ಕರ್ನಾಟಕದ ಶಾಂತಿ ಸ್ವಭಾವವನ್ನು ಕದಡುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕರು ಪ್ರತಿಭಟಿಸುವ ಮೂಲಕ ಕನ್ನಡ ವಿರೋಧಿಗಳಿಗೆ ತಕ್ಕಪಾಠ ಕಲಿಸುತ್ತಿದ್ದಾರೆ. ಅವರನ್ನೆಲ್ಲಾ ಇಂತಹ ಸಂದರ್ಭದಲ್ಲಿ ನಾವು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.


ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ನಮ್ಮ ಕನ್ನಡ ಪ್ರೇಮ ನವೆಂಬರ್ ತಿಂಗಳ ಕನ್ನಡ ಪ್ರೇಮವಾಗಬಾರದು. ದಿನನಿತ್ಯದ ನಮ್ಮ ನಡೆನುಡಿ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಿಕೊಳ್ಳುವ ಮನಸ್ಥಿತಿ ನಾವು ಬೆಳೆಸಿಕೊಳ್ಳಬೇಕು. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದರೆ ಕನ್ನಡದ ಶಕ್ತಿ ಎಷ್ಟು ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ನಾವು ದಿನನಿತ್ಯ ಕನ್ನಡ ಭಾಷೆ ಬಳಕೆ ಮಾಡಿದರೆ ಭಾಷೆ

ಉಳಿಯುತ್ತದೆ, ಬೆಳೆಯುತ್ತದೆ. ಭಾಷೆ ಬಳಕೆ ಕಡಿಮೆಯಾದಷ್ಟು ನಶಿಸಿ ಹೋಗುತ್ತದೆ. ನೆರೆಭಾಷೆಯನ್ನು ಜ್ಞಾನಾರ್ಜನೆಗೆ ಸೀಮಿತವಾಗಿರಿಸಿಕೊಂಡು ಕನ್ನಡ ಪುಸ್ತಕಗಳನ್ನು ಓದುವ ಮೂಲಕ, ಕನ್ನಡವನ್ನು ಕಲಿತು ಕಲಿಸುವ ಮೂಲಕ ಕನ್ನಡವನ್ನು ಬೆಳೆಸಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲ್ಲೂಕು ಪಂಚಾಯ್ತಿ ಇಓ ನಾಗೇಶ್ ಬ್ಯಾಲಾಳ್ ಉಪಸ್ಥಿತರಿದ್ದರು. ನಂತರ ಆರಕ್ಷಕ, ಗೃಹರಕ್ಷಕ, ಎನ್.ಸಿ.ಸಿ. ಸೇರಿದಂತೆ ವಿವಿಧ ಶಾಲಾ ತುಕಡಿಗಳಿಂದ ಕವಾಯತ್ತು ನಡೆಯಿತು.

By admin

ನಿಮ್ಮದೊಂದು ಉತ್ತರ

error: Content is protected !!