ಶಿವಮೊಗ್ಗ : ಅಕ್ಟೋಬರ್ ನವೆಂಬರ್ ೦೮ರಂದು ನಗರದ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ರಾಜ್ಯದ ಸುಮಾರು ೫೦ಕ್ಕೂ ಹೆಚ್ಚಿನ ಬೃಹತ್ ಕಂಪನಿಗಳ ಉದ್ಯೋಗದಾತರು ಆಗಮಿಸಿ, ೫೦೦೦ಕ್ಕೂ ಹೆಚ್ಚಿನ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃಧ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಶಿವಮೊಗ್ಗ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಉದ್ಯೋಗ ಮೇಳದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣ ಮತ್ತು ಅನುತ್ತೀರ್ಣರಾದವರು, ಐಟಿಐ, ಡಿಪ್ಲೋಮಾ ಸೇರಿದಂತೆ ಎಲ್ಲಾ ರೀತಿಯ ಉನ್ನತ ಶಿಕ್ಷಣ, ತರಬೇತಿ ಪಡೆದ ಯುವಕರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೇ ಮೇಳ ನಡೆಯುವ ದಿನದಂದು ಆಕಾಂಕ್ಷಿಗಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದರು.


ಈ ಮೇಳದಿಂದಾಗಿ ಭವಿಷ್ಯದ ದಿನಗಳಲ್ಲಿ ಪ್ರತಿಭಾವಂತ ಪದವೀಧರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಮಾತ್ರವಲ್ಲ ಅದರ ಪ್ರಾಥಮಿಕ ಪರಿಚಯವಾಗಲಿದೆ. ಅನೇಕ ವಿಷಯಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿಗಳ ಮಾಹಿತಿಗಳು ದೊರೆಯಲಿವೆ. ಸ್ವಯಂ ಉದ್ಯೋಗ ಆರಂಭಿಸಲಿಚ್ಚಿಸುವವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದರು.


ಸಾಫ್ಟ್‌ವೇರ್, ಆಟೋಮೊಬೈಲ್, ಫೌಂಡ್ರಿ, ರಿಟೇಲ್ ಫಾರ್ಮಸಿ, ಹಣಕಾಸು ವಿಮೆ, ಗಾರ್ಮೆಂಟ್ಸ್ ಸೇರಿದಂತೆ ೫೦ಕ್ಕೂ ಹೆಚ್ಚಿನ ಸ್ಥಳೀಯ ಮತ್ತು ರಾಜ್ಯ ಮಟ್ಟದ ಬೃಹತ್ ಕಂಪನಿಗಳು ಭಾಗವಹಿಸಲಿವೆ. ಈ ಮೇಳದಲ್ಲಿ ಅಪ್ರೆಂಟಿಸ್‌ಶಿಫ್ ತರಬೇತಿ ಪಡೆಯಲಿಚ್ಚಿಸುವವರು, ಕೌಶಲ್ಯ ತರಬೇತಿ ಪಡೆಯುವವರು, ಆಯ್ಕೆಗೊಂಡ ನಂತರ ನಿಗಧಿಪಡಿಸಿದ ವಿಷಯದಲ್ಲಿ ತರಬೇತಿ ಪಡೆಯಲಿಚ್ಚಿಸುವವರು,

ಸ್ವಯಂ ಉದ್ಯೋಗ ಆರಂಭಿಸಲಿಚ್ಚಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದ ಅವರು, ಇದೇ ಸಂದರ್ಭದಲ್ಲಿ ಆಸಕ್ತರಿಗಾಗಿ ಬ್ಯಾಂಕುಗಳ ಸಾಲಸೌಲಭ್ಯ ಮುಂತಾದ ಮಾಹಿತಿಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ ಎಂದ ಅವರು, ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು, ಕೈಗಾರಿಕೋದ್ಯಮಿಗಳು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.


ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯಾಧುನಿಕ ರೀತಿಯ ಎಲೆಕ್ಟ್ರಿಕ್ ವೆಹಿಕಲ್ ಮತ್ತು ರೋಬೋಟಿಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು ೭೦,೦೦೦ಮಕ್ಕಳು ಐಟಿಐ ಮತ್ತು ಡಿಪ್ಲೋಮಾ ತರಬೇತಿಗೆ ದಾಖಲಾಗಿದ್ದಾರೆ

. ತರಬೇತಿ ಪಡೆದ ವಿದ್ಯಾರ್ಥಿಗಳು ಪಡೆದುಕೊಳ್ಳುವ ಪ್ರಮಾಣ ಪತ್ರಕ್ಕೆ ದೇಶ-ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ.

  • ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಕೌಶಲ್ಯಾಭಿವೃದ್ಧಿ ಇಲಾಖೆಯ ನಿರ್ದೇಶಕ, ಬೆಂಗಳೂರು.
    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ಕೌಶಲ್ಯಾಭಿವೃದ್ಧಿ ಅಧಿಕಾರಿ ಹೆಚ್.ಎಸ್.ಸುರೇಶ್, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‌ಖಾನ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!