ಶಿವಮೊಗ್ಗ : ಈದ್ ಮೆರವಣಿಗೆ ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ನಡೆದ ಅಹಿತಕರ ಘಟನೆಗೆ ಕಿಡಿಗೇಡಿಗಳು ನಡೆಸಿದ ದುಷ್ಕೃತ್ಯ ಕಾರಣ. ಕಿಡಿಗೇಡಿಗಳಿಂದಾಗಿಯೇ ಘಟನೆ ನಡೆದಿದೆ ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡರು ಮಂಜುನಾಥ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಶಾಂತಿ ಕದಡಿದೆ. ಕೆಲವು ಕಿಡಿಗೇಡಿಗಳಿಂದಾಗಿ ಈ ಘಟನೆ ನಡೆದಿದೆ. ಇಂತಹ ಘಟನೆ ಮರುಕಳಿಸದಂತೆ ಬಿಗಿಯಾದ ಕ್ರಮ ಜರುಗಿಸಬೇಕಿದೆ ಎಂದರು.
ರಾಗಿಗುಡ್ಡದಲ್ಲಿ ಘಟನೆ ನಡೆದಿದ್ದರೂ, ಶಿವಮೊಗ್ಗದ ಎಎ ಸರ್ಕಲ್ ನಲ್ಲಿ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆದಿದೆ. ಇಡೀ ಶಿವಮೊಗ್ಗದಲ್ಲಿ ಶಾಂತಿ- ಸೌಹಾರ್ಧತೆಯಿಂದಿದೆ. ತಮ್ಮ ಪಾಡಿಗೆ ಹಬ್ಬ, ಮೆರವಣಿಗೆ ಆಚರಿಸಲಿ ಎಂದು ಪೊಲೀಸರು ಬಿಟ್ಟಿದ್ದರು. ಪದೇ ಪದೇ ಈ ಘಟನೆ ಬಗ್ಗೆ ಮಾತನಾಡಿ ಈ ವಿಚಾರ ಜೀವಂತವಾಗಿರಿಸಲು ನಾನು ಬಯಸುವುದಿಲ್ಲ. ಕಟೌಟ್, ಬ್ಯಾನರ್ ಗಳು ವಿವಾದಾತ್ಮಕವಿದ್ದರೂ ಅದನ್ನು ಯಾಕೆ ಪೊಲೀಸರು ತೆಗೆಸಿಲ್ಲ ಎಂಬುದು ಪ್ರಶ್ನೆಯಾಗಿದೆ ಎಂದರು.
ಬಹುಷಃ ಆ ಸಮಯದಲ್ಲಿ ಕಟೌಟ್, ಬ್ಯಾನರ್ ಗಳನ್ನು ತೆಗೆಸಿದ್ದರೆ ಜನರು ಉದ್ರಿಕ್ತರಾಗುತ್ತಾರೆಂದು ಪೊಲೀಸರು ಭಾವಿಸಿರಬಹುದು. ಇದಕ್ಕೆ ಪೊಲೀಸರೇ ಉತ್ತರಿಸಬೇಕು. ಈಗ ಈ ವಿಚಾರದಲ್ಲಿ ಹೆಚ್ಚು ಪ್ರತಿಕ್ರಿಯಿಸಿದರೆ ಅದಕ್ಕೆ ಮತ್ತೆ ಬೆರೆಯದೆ ಆದ ರೀತಿಯಲ್ಲಿ ಪ್ರತಿಕ್ರಿಯೆ ಬರಬಹುದು. ಹೀಗಾಗಿ ಎಲ್ಲರೂ ಮೌನವಾಗಿ ಈ ಗೊಂದಲ-ಗದ್ದಲ ಸರಿಪಡಿಸಬೇಕಾಗಿದೆ. ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು