ಶಿವಮೊಗ್ಗ: ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆಗಳನ್ನು ಆರಂಭಿಸುವುದಾಗಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳ ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ಆಡಳಿತ ಮಂಡಳಿ ಸೇರಿದಂತೆ ಸಹಕಾರಿ ವಲಯದಿಂದ ನಿರೀಕ್ಷೆಗೂ ಮೀರಿದ ಪ್ರೀತಿ, ವಿಶ್ವಾಸ, ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಸಹಕಾರ ಕ್ಷೇತ್ರದ ಶಕ್ತಿ ಅನಾವರಣ ಆಗಿದೆ. ಬಹಳಷ್ಟು ಜನರು ಆರ್.ಎಂ. ಮಂಜುನಾಥಗೌಡ ಅವರನ್ನು ಸಹಕಾರ ಕ್ಷೇತ್ರದಿಂದ ತೆಗೆಯಬೇಕೆಂದು ಪ್ರಯತ್ನ ನಡೆಸಿದ್ದರು. ಆದರೆ, ಸಹಕಾರಿಗಳು ತೋರಿದ ಪ್ರೀತಿ ವಿಶ್ವಾಸದಿಂದ ಮತ್ತೆ ಅಧ್ಯಕ್ಷನಾಗಿದ್ದೇನೆ. ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಅದನ್ನು ನಿಭಾಯಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಮುಂದಿನ ಐದು ವರ್ಷಗಳ ಅವಧಿಗೆ ಡಿಸಿಸಿ ಬ್ಯಾಂಕ್ ಜೊತೆಗಿರುವ ಒಂದು ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು, 174 ಪ್ರಾಥಮಿಕ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಂಘಗಳು, ಆದ್ಯತಾ ಕ್ಷೇತ್ರವಾದ ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಐದು ದಿನಗಳಲ್ಲಿ ಯೋಜನಾ ವರದಿಯನ್ನು ನಿಮ್ಮ ಮುಂದಿಡುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡಬಹುದಾದ ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು. 

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಾಥಮಿಕ ಸಹಕಾರ ಸಂಘಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿವೆ. ಪ್ರಾಥಮಿಕ ಸಹಕಾರ ಕೇಂದ್ರಗಳನ್ನು ಬಹುಉದ್ದೇಶಿತ ಸೇವಾ ಕೇಂದ್ರಗಳಾಗಿ ಬದಲಾವಣೆ ಮಾಡಲಿದ್ದು, ಒಂದೇ ಸೂರಿನಡಿ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಾದ ಎಲ್ಲಾ ಸೇವೆಗಳು ಲಭ್ಯ ಇರುತ್ತವೆ. ಗೊಬ್ಬರ, ಬೀಜ, ಸಿಮೆಂಟ್, ಪರಿಕರಗಳು, ಬೆಳೆ ಮಾರಾಟ ವ್ಯವಸ್ಥೆ ಮೊದಲಾದವುಗಳನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕಲ್ಪಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಕೂಡ ಸಹಕಾರ ಕ್ಷೇತ್ರಕ್ಕೆ ಅಗತ್ಯ ನೆರವು ಕಲ್ಪಿಸಿದೆ. ಪ್ರಾಥಮಿಕ ಸಹಕಾರ ಸಂಘಗಳಿಗೆ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕಲ್ಪಿಸುತ್ತಿದೆ. ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ಮುಂದಾಗಿದೆ. ಜನ ಔಷಧಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸೂಪರ್ ಮಾರ್ಕೆಟ್ ಗಳ ರೀತಿಯೂ ಪ್ರಾಥಮಿಕ ಸಹಕಾರ ಸಂಘಗಳು ಕಾರ್ಯನಿರ್ವಹಿಸಲಿದ್ದು, ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳು ಲಭ್ಯ ಇರುತ್ತವೆ ಎಂದರು.

ಅದಕ್ಕಿಂತ ಮೊದಲು ಕಟ್ಟಡಗಳು ಇಲ್ಲದ ಪ್ರಾಥಮಿಕ ಸಹಕಾರ ಸಂಘಗಳಿಗೆ ಸರ್ಕಾರದಿಂದ ನೆರವು ಪಡೆಯದೆ ಕಟ್ಟಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಇನ್ನೂ ಐದು ವರ್ಷಗಳಲ್ಲಿ ನಮ್ಮ ವರ್ಕಿಂಗ್ ಕ್ಯಾಪಿಟಲ್ 5000 ಕೋಟಿ ರೂಪಾಯಿ ಮುಟ್ಟಿದರೆ ಜಿಲ್ಲೆಯಲ್ಲಿ ಬೇರೆ ವಾಣಿಜ್ಯ ಬ್ಯಾಂಕುಗಳಿಂದ ನಾವು ಮುಂದಿರುತ್ತೇವೆ ಎಂದು ತಿಳಿಸಿದರು.

1994 -95ರ ಅವಧಿಯಲ್ಲಿ 30 ಕೋಟಿ ರೂಪಾಯಿ ಇದ್ದ ವರ್ಕಿಂಗ್ ಕ್ಯಾಪಿಟಲ್ ಈಗ 2000 ಕೋಟಿ ರೂ. ಇದೆ. ಸಹಕಾರ ಕ್ಷೇತ್ರ ರಾಜಕೀಯದಿಂದ ಹೊರತಾಗಿರಬೇಕು. ಈ ನಡುವೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳಿದ್ದು, ಮತ್ತೆ ರಾಜಕೀಯ ಜಾತಿ ಹೊರತುಪಡಿಸಿದ ಸಹಕಾರಿ ವ್ಯವಸ್ಥೆಯನ್ನು ರೂಪಿಸುತ್ತೇವೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಹಳ ವರ್ಷಗಳ ನಂತರ ಬರಗಾಲ ಉಂಟಾಗಿದ್ದು ರೈತರಿಗೆ 174 ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ಅಗತ್ಯ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರಿ ವ್ಯವಸ್ಥೆಯಲ್ಲಿ 2.60 ಲಕ್ಷ ರೈತ ಸದಸ್ಯರಿದ್ದಾರೆ ಎಲ್ಲರಿಗೂ ಆರ್ಥಿಕ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. 1994 -95ರಲ್ಲಿ 11,000 ರೈತರಿಗೆ 21 ಕೋಟಿ ರೂ. ನಷ್ಟು ಸಾಲ ಒದಗಿಸಲಾಗಿತ್ತು. ಈಗ 1.20 ಲಕ್ಷ ರೈತರಿಗೆ 1000 ಕೋಟಿ ರೂ.ಗೂ ಅಧಿಕ ಸಾಲ ಒದಗಿಸಲಾಗಿದೆ ಎಂದರು.

ಕಳೆದ ಮೂರು ವರ್ಷದಿಂದ ಸ್ವಸಹಾಯ ಸಂಘ ಗುಂಪುಗಳಿಗೆ 160 ರೂ. ನಷ್ಟು ಸಾಲ ನೀಡಲಾಗಿತ್ತು. ಅದು ಶೇಕಡ 70ಕ್ಕೆ ಕುಸಿದಿತ್ತು. ಈಗ ಮತ್ತೆ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲು ಸೌಲಭ್ಯ ಕಲ್ಪಿಸಲಾಗುವುದು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್ ಶಾಖೆಗಳ ಮೂಲಕವೂ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು. ಹಾಲು ಉತ್ಪಾದಕರ ಸಂಘಗಳಿಗೂ ಅಗತ್ಯ ಸಹಕಾರ ನೀಡಲಾಗುವುದು. ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಲಿ. ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮೊದಲು 32 ಕೋಟಿ ರೂ. ನಷ್ಟು ಲಾಭ ಇತ್ತು. ಎಂದು ಆರ್‌ಎಂಎಂ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಎಲ್. ಷಡಕ್ಷರಿ, ಪ್ರಮುಖರಾದ ಪರಮೇಶ್, ದುಗ್ಗಪ್ಪಗೌಡ, ಶ್ರೀಪಾದ ಹೆಗಡೆ ನಿಸರಾಣಿ, ಸುಧೀರ್, ಜೆ.ಪಿ. ಯೋಗೇಶ್ ವ್ಯವಸ್ಥಾಪಕ ನಿರ್ದೇಶಕ ವಾಸುದೇವ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!