ಶಿವಮೊಗ್ಗ: ತಾಲೂಕಿನ ಮತ್ತೊಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ಮತ್ತೋಡು ಮತ್ತದರ ಸುತ್ತಮುತ್ತಲ ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.
ಅಬ್ಬಲಗೆರೆ ಗ್ರಾಮ ಪಂಚಾಯತಿ ಸದಸ್ಯರಾದ ಕೆ. ಹರ್ಷಭೋವಿ, ರಂಜಿತಾ ಹಾಗೂ ಭಾಗ್ಯ ಎಸ್. ಹೊಸೆಟ್ಟಿ ಅವರ ಸಹಕಾರದೊಂದಿಗೆ ಗರ್ಭಿಣಿಯರಿಗೆ ಸೀರೆ, ಅರಿಣಿನ ಕುಂಕುಮ, ಬಳೆ ಸಮೇತ ಉಡಿ ತುಂಬಿ ಸೀಮಂತ ಶಾಸ್ತ್ರ ನೆರವೇರಿಸಲಾಯಿತು.
ಅರ್ಥಪೂರ್ಣವಾಗಿ ನಡೆದ ಈ ಸೀಮಂತ ಶಾಸ್ತ್ರಕ್ಕೆ ಗರ್ಭೀಣಿಯರು ಖುಷಿ ಪಟ್ಟು ಸಂಭ್ರಮಿಸಿದರು. ಕೇಂದ್ರ ಸರ್ಕಾರದ ʼಪೋಷಣ್ ಅಭಿಯಾನʼ ಕಾರ್ಯಕ್ರಮದಡಿ ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಪ್ರಾತ್ಯಕ್ಷಿತೆ ಕೂಡ ಏರ್ಪಡಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವಿದ್ಯಾ ಅವರು ಪೋಷಣ್ ಅಭಿಯಾನದ ಮಹತ್ವ ಕುರಿತು ವಿವರಿಸಿದರು. ಬದಲಾದ ಕಾಲದಲ್ಲೀಗ ಕೂಡು ಕುಟುಂಬಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹಾಗೆಯೇ ಮಹಿಳೆಯರಿಗೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಹೀಗಾಗಿ ಗರ್ಭೀಣಿಯರು ತಮ್ಮನ್ನು ತಾವು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಆಕೆ ಹೆಚ್ಚು ಸಂತೋಷವಾಗಿರಬೇಕಾದ ಸಂದರ್ಭದಲ್ಲಿಯೇ ಹೆಚ್ಚು ಒತ್ತಡಕ್ಕೆ ಸಿಲುಕುತ್ತಿದ್ದಾಳೆ. ಇದೇ ಕಾರಣಕ್ಕೆ ಸರ್ಕಾರವು ಮಹಿಳಾ ಮತ್ತು ಕಲ್ಯಾಣ ಇಲಾಖೆ ಮೂಲಕ ಪೋಷಣ್ ಅಭಿಯಾನ ಆರಂಭಿಸಿ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರಗಳ ಪೂರೈಕೆಯ ಜತೆಗೆ ಆಕೆಯ ಸೀಮಂತ ಕಾರ್ಯಕ್ರಮಕ್ಕೂ ಆದ್ಯತೆ ನೀಡಿದೆ ಎಂದರು.
ತಾಯಿ ಆರೋಗ್ಯವಾಗಿದ್ದರೆ ಆರೋಗ್ಯವಂತ ಮಗು ಹುಟ್ಟುತ್ತದೆ. ಹಾಗೆಯೇ ಆರೋಗ್ಯವಂತಹ ಮಗುವಿನ ಮೂಲಕ ಆರೋಗ್ಯವಂತ ಸಮಾಜವೂ ನಿರ್ಮಾಣವಾಗಲಿದೆ. ಇದು ಪೋಷಣ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸುವುದು ಅತ್ಯಗತ್ಯವಾಗಿದೆ. ಇದೇ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರತಿ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದ್ದು, ಇದರ ಸೌಲಭ್ಯ ಪಡೆದುಕೊಳ್ಳಬೇಕಿದೆ ಎಂದು ಮನವಿ ಮಾಡಿದರು.
ಅಬ್ಬಲಗೆರೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೆ. ಹರ್ಷ ಭೋವಿ ಅಧ್ಯಕ್ಷತೆ ವಹಿಸಿದ್ದರು.ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಕೀರ್ತನಾ, ಮತ್ತೋಡು ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯ ಹೊಸೆಟ್ಟಿ, ಮತ್ತೋಡು ಶಾಲಾ ಶಿಕ್ಷಕ ಮಂಜುನಾಥ್ ಹಾಜರಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ರಂಜಿತಾ ಪ್ರವೀಣ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಮುದ್ದುಕೃಷ್ಣ ಮತ್ತು ರಾಧೆಯ ವೇಷಗಳಲ್ಲಿ ಕಾಣಿಸಿಕೊಂಡರು