ಶಿವಮೊಗ್ಗ, ಸೆ.
ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಶಾಂತಿ ಸಂದೇಶ ಸಾರುವಂತಹ ಬಗೆಯಲ್ಲಿ ಗಣೇಶ ವಿಸರ್ಜನೆ ಪ್ರಕ್ರಿಯೆ ನಡೆಯುತ್ತಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ರಕ್ಷಣೆ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶ್ರದ್ಧಾಭಕ್ತಿಯ ಆಚರಣೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಅವರಿಂದು ಮಧ್ಯಾಹ್ನ ಮಾಧ್ಯಮ ಸ್ನೇಹಿತರೊಂದಿಗೆ ಮಾತನಾಡುತ್ತಾ ಯಾವುದೇ ಅಹಿತಕರ ಘಟನೆಗಳು ನಡೆಯದಂತಹ, ಅದಕ್ಕೆ ಅವಕಾಶವಾಗದಂತಹ ಸನ್ನಿವೇಶವನ್ನು ಎಲ್ಲರೂ ರೂಪಿಸಬೇಕಿದೆ. ಅನಗತ್ಯ ಸುಳ್ಳು ಸುದ್ದಿಗಳನ್ನು ಹರಡುವುದು ಬೇಡ. ಯಾವುದೇ ಮಾಹಿತಿಯನ್ನು ಕೇಳಿದರೆ ನಾನು ನೀಡುತ್ತೇನೆ. ಜಿಲ್ಲೆಯ ಎಲ್ಲಾ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಅತ್ಯಂತ ಸಹಕಾರಿಯಾಗಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದೆ ಎಂದು ತಿಳಿಸಿದರು.
ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿದ್ದು ಯಾವುದೇ ವಿಷಯವಾಗಿದ್ದರೂ ಅದನ್ನು ನನ್ನ ಗಮನಕ್ಕೆ ತನ್ನಿ. ವ್ಯವಸ್ಥಿತವಾಗಿ ಗಣೇಶ ವಿಸರ್ಜನೆ ಆಚರಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಬರುವ 28ರಂದು ಹಿಂದೂಮಹಾಸಭಾ, 30ರಂದು ಓಂ ಗಣಪತಿ ಹಾಗೂ ಮುಂದಿನ ತಿಂಗಳು ಒಂದರಂದು ಈದ್ ಮಿಲಾದ್ ಆಚರಣೆಯ ಮೆರವಣಿಗೆ ನಡೆಯುತ್ತಿದ್ದು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಗಣೇಶ ವಿಸರ್ಜನೆ ಪ್ರಕ್ರಿಯೆ ನಡೆದಿದ್ದು ಉಳಿದಿರುವ ಗಣೇಶ ವಿಸರ್ಜನೆಗೆ ಪೂರಕ ವಾತಾವರಣವನ್ನು ಇಲಾಖೆ ಕಲ್ಪಿಸುತ್ತದೆ. ಅದಕ್ಕೆ ಸಹಕರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳು ಕೋರಿದರು
ಈ ಸಂದರ್ಭದಲ್ಲಿ ಶಿವಮೊಗ್ಗ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಬಾಲರಾಜ್ ಅವರು ಉಪಸ್ಥಿತರಿದ್ದರು.