ಶಿವಮೊಗ್ಗ: ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ೨೨-೦೯-೨೦೨೩ರ ಇಂದು ಶುಕ್ರವಾರ ಬೆಳಿಗ್ಗೆ ಜಿಲ್ಲಾ ರಕ್ಷಣಾಧಿಕಾರಿಯವರಿಗೆ ದೂರು ನೀಡಲಾಗಿದೆಯಲ್ಲದೆ ಗೃಹ ಸಚಿವರೂ ಕೂಡ ಈ ಬಗ್ಗೆ ಗಮನ ಹರಿಸುವಂತೆ ಕೋರಿ ಪ್ರತ್ಯೇಕವಾಗಿ ಅವರಿಗೂ ಮನವಿ ರವಾನಿಸಲಾಗಿದೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನ್ಯಾಯಾಲಯ ಹಾಗೂ ಪ್ರಾಧಿಕಾರದ ನಿಯಮಾವಳಿಗಳನ್ನು ಪಾಲಿಸುತ್ತಿದೆ. ಆದರೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಡಿ.ಕೆ. ಶಿವಕುಮಾರ್ ಅವರನ್ನು ನೀರಿನ ಕಳ್ಳ ಎಂದು ಅವಹೇಳನ ಹಾಗೂ ಅವಮಾನಕಾರಿಯಾಗಿ ೨೧-೦೯-೨೦೨೩ರಂದು ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಹೀಯಾಳಿಸಿ ಅವಮಾನ ಮಾಡಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲವಿರುವುದರಿಂದ ಕೆಆರ್ಎಸ್ ಜಲಾಶಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರಿಲ್ಲ. ಆದರೂ ಮಳೆ ನಿರೀಕ್ಷೆಯ ಹಿನ್ನೆಲೆಯಲ್ಲಿ ನೀರು ಬಿಡಲಾಗಿದೆ. ಇದರಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರ ಪಾತ್ರವೇನೂ ಇಲ್ಲ. ಆದರೆ ರಾಜ್ಯ ಸರ್ಕಾರ ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿದೆ ಎಂದು ಈಶ್ವರಪ್ಪ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ.
ಕೇವಲ ಪ್ರಚಾರ ಹಾಗೂ ತನ್ನಿ ಇರುವಿಕೆ ಹಾಗೂ ಅಸ್ತಿತ್ವದ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಬಾಲಿಶವಾಗಿ ಹಾಗೂ ಸರ್ಕಸ್ನ ಜೋಕರ್ನಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಈಶ್ವರಪ್ಪ ಅವರ ಯೋಗ್ಯತೆ ಏನೆಂಬುದನ್ನು ಅರಿತಿದ್ದ ಬಿಜೆಪಿ ಹೈಕಮಾಂಡ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡಲಿಲ್ಲ.
ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಸೇರಿದಂತೆ ಮತ್ತಿತರೆ ಮುಖಂಡರ ನೇತೃತ್ವದಲ್ಲಿ ಗ್ಯಾರಂಟಿ ಪಕ್ಷವನ್ನು ನಂಬಿ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ.
ಕೆ.ಎಸ್. ಈಶ್ವರಪ್ಪನವರಂತೆ ಡಿ.ಕೆ. ಶಿವಕುಮಾರ್ ಆಗಲಿ, ಮತ್ತಿತರೆ ಕಾಂಗ್ರೆಸ್ ಸಚಿವರಾಗಲಿ ಮನೆಯಲ್ಲಿ ಹಣ ಎಣಿಸುವ ಮಿಷಿನ್ ಇಟ್ಟು ಕೊಂಡಿಲ್ಲ. ಯಾರು ಕಳ್ಳರು, ಯಾರು ಸುಳ್ಳರು, ಭ್ರಷ್ಟಾತಿಭ್ರಷ್ಟರು ಎಂಬುವುದು ನಾಡಿನ ಜನತೆಗೆ ತಿಳಿದಿದೆ.
ಹಗಲು ದರೋಡೆಕೋರರಾಗಿರುವವರು ಕಾಂಗ್ರೆಸ್ ಅಥವಾ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಇಲ್ಲದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ, ನಿವೃತ್ತ ಪೊಲೀಸ್ ಅಧಿಕಾರಿ ಮಂಜಪ್ಪ, ಜಾನ್ ಡಿಸೋಜ, ಸಿದ್ದಪ್ಪ, ಜಿ.ಡಿ. ಮಂಜುನಾಥ್, ತೀರ್ಥಹಳ್ಳಿ ನಾಗೇಶ್, ರಾಮಚಂದ್ರ, ಗಾಜನೂರು ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.