ಸಾಗರ : ರಾಜ್ಯದಲ್ಲಿ ಯಾವುದೇ ಸರ್ಕಾರ ಮತ್ತು ಅಧಿಕಾರಿಗಳಿದ್ದರೂ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೈಕ್ಷಣಿಕ ಚಟುವಟಿಕೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಮತ್ತು ದೈಹಿಕ ಶಿಕ್ಷಕರ ಇಲ್ಲದೆ ಇರುವುದರಿಂದ ಮಕ್ಕಳಲ್ಲಿ ಕ್ರೀಡೆ ಹಾಗೂ ಶಿಸ್ತು ಕಾಣಲು ಸಾಧ್ಯವಾಗುತ್ತಿಲ್ಲ. ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ. ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ ಕೊಟ್ಟಾಗ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ದಿಯಾಗುತ್ತದೆ ಎಂದರು.
ಶೈಕ್ಷಣಿಕ ಬದುಕಿನಲ್ಲಿ ಪದವಿಪೂರ್ವ ಶಿಕ್ಷಣ ಹಂತ ಅತ್ಯಂತ ಮಹತ್ವದ್ದಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಉನ್ನತ ಸ್ಥಾನಕ್ಕೆ ತಲುಪುವ ನಿಟ್ಟಿನಲ್ಲಿ ಚಿಂತನೆ ಈ ಹಂತದಲ್ಲಿ ರೂಢಿಸಿಕೊಳ್ಳಬೇಕು. ಕ್ರೀಡೆ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು, ಕ್ರೀಡಾಪಟುಗಳು ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕ್ರೀಡಾ ಧ್ವಜರೋಹಣ ನೆರವೇರಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಬಿ., ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಜೊತೆ ದೈಹಿಕ ಶಿಕ್ಷಕರ ಕೊರತೆ ಇದೆ. ಇರುವ ಶಿಕ್ಷಕರೆ ಮಕ್ಕಳಿಗೆ ಪಠ್ಯದ ಜೊತೆಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣ ಮತ್ತು ಕ್ರೀಡೆ ಒಂದು ನಾಣ್ಯದ ಎರಡು ಮುಖ ಇದ್ದಂತೆ. ಕ್ರೀಡೆ ಮೂಲಕ ಉನ್ನತ ಸ್ಥಾನಕ್ಕೆ ತಲುಪಬಹುದು ಎಂದು ಹೇಳಿದರು.
ಪ್ರಾಚಾರ್ಯ ಸತ್ಯನಾರಾಯಣ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಇಂದೂಧರ ಗೌಡ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಚಂದ್ರಪ್ಪ ಗುಂಡಪಲ್ಲಿ, ಅರುಣಕುಮಾರ್, ಜಿ.ಪರಮೇಶ್ವರ್, ರವೀಂದ್ರ ಕೆ.ವಿ., ಗುರುರಾಜ್ ಇನ್ನಿತರರು ಹಾಜರಿದ್ದರು. ಸೌಜನ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಂಜಪ್ಪ ಪಿ. ಸ್ವಾಗತಿಸಿದರು. ಮಾಲಾ ವಂದಿಸಿದರು. ಡಾ. ದೇವೇಂದ್ರ ಕೆ.ಎಸ್. ನಿರೂಪಿಸಿದರು.