ಶಿವಮೊಗ್ಗ  : ಹಣ ವಂಚನೆ ಪ್ರಕರಣ ಸಂಬಂಧ ಚೈತ್ರ ಕುಂದಾಪುರ ಅವರನ್ನು ಸಿಸಿಬಿ  ವಿಚಾರಣೆ ನಡೆಸುತ್ತಿದೆ. ಒಂದು ವೇಳೆ ಆಕೆ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಚೈತ್ರಾ ಕುಂದಾಪುರ ಪ್ರಕರಣ ಕುರಿತು ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೇಟ್ ಪಡೆಯುವ ಆ ಸಂಸ್ಕೃತಿ‌ ಇಲ್ಲ. ಅವರು ಯಾರೋ ಹೇಳಿದ ತಕ್ಷಣ ಬಿಜೆಪಿ ಟಿಕೇಟ್ ಬಿಕರಿ‌ ಆಗಿಲ್ಲ. ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದರು.

ದೆಹಲಿ ಸಂಪರ್ಕ, ಆರ್ ಎಸ್ ಎಸ್ ಸಂಪರ್ಕ ಇದೆ ಅಂತಾ ಅವರು ಹೇಳುತ್ತಾರೆ ಅಷ್ಟೆ. ಹೇಳಿಕೆ ನೀಡಿದ ಕ್ಷಣ ಎಲ್ಲವೂ ಸತ್ಯವಾಗುವುದಿಲ್ಲ. ತನಿಖೆ ನಡೆಯಲಿ ಸತ್ಯ ಏನೆಂದು ಹೊರಬರುತ್ತದೆ ಎಂದರು.

ಸಚಿವ ಡಿ.ಸುಧಾಕರ್ ವಿರುದ್ದ ಎಫ್ ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಒಬ್ಬರಿಗೊಂದು ಕಾನೂನು ರೀತಿ ವರ್ತನೆ ಮಾಡುತ್ತಿದೆ. ಪ್ರಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತರುವವರೆಗೆ ಸರ್ಕಾರ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದೆ ಎಂದು ಪ್ರಶ್ನಿಸಿದರು.

ಶಂಕಿತ ಭಯೋತ್ಪಾದಕ ಅರಾಫತ್ ಅಲಿ ಎನ್ ಐಎ ಬಂಧನ ವಿಚಾರ ಕುರಿತು ಪ್ರತಿಕ್ರಿಸಿದ ಆರಗ, ಎನ್ ಐಎ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ ಕೇವಲ‌ ಪ್ರಕರಣ ದಾಖಲಾಗುತ್ತಿದ್ದವು. ತನಿಖೆ ಆಗುತ್ತಿರಲಿಲ್ಲ. ಈಗ ತನಿಖೆ ನಡೆದು ಅದಕ್ಕೊಂದು ಅಂತ್ಯ ಹಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ತೀರ್ಥಹಳ್ಳಿ ಅಂದ ಕೂಡಲೇ ಕುವೆಂಪು, ಗೋಪಾಲ ಗೌಡರು‌, ಅನಂತಮೂರ್ತಿ, ಕಡಿದಾಳು ಮಂಜಪ್ಪ ಹೆಸರು ಕೇಳಿ ಬರುತಿತ್ತು. ಅವರ ಹೆಸರು ಕೇಳಿ ನಾವೆಲ್ಲಾ ಹೆಮ್ಮೆ ಪಡುತ್ತಿದ್ದೆವು. ಇದೀಗ ತೀರ್ಥಹಳ್ಳಿ ಅಂದರೆ ಟೆರರಿಸ್ಟ್ ಹೆಸರು ಕೇಳಿ ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!