ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ, ಆ.೦೬:
ಶಿವಮೊಗ್ಗ ನಗರದ ಹೊಳೆಹೊ ನ್ನೂರು ರಸ್ತೆ ಮಾರ್ಗದಲ್ಲಿರುವ ಶ್ರೀ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಆ.೦೮, ೦೯ ರಂದು ವಿಜೃಂಭಣೆಯಿಂದ ನಡೆಯಲಿರುವ ಅಡಿಕೃತ್ತಿಕೆ ಗುಡ್ಡೆಕಲ್ ಜಾತ್ರೆಗೆ ಶ್ರಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವ ಸ್ಥಾನ ಟ್ರಸ್ಟ್ ವತಿಯಿಂದ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ.
ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಈ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಅಡಿಕೃತ್ತಿಕೆ ಅಂತಲೂ ಆಚರಿಸಲಾಗುತ್ತದೆ. ತಮಿಳುನಾಡಿನಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊ ಬ್ಬರು ಈ ಸ್ಥಳದಲ್ಲಿ ಸಣ್ಣದಾದ ವಿಗ್ರಹ ಸ್ಥಾಪಿಸಿ ಪೂಜೆ ಮಾಡಲು ಆರಂಭಿ ಸಿದ್ದರು ಎಂಬ ಪ್ರತೀತಿ ಇದೆ.
ಗುಡ್ಡೆಕಲ್ ಜಾತ್ರೆ ಅಂಗವಾಗಿ ದೇವಸ್ಥಾನದ ಸಮೀಪದಲ್ಲಿ ಸ್ವಾಗತ ಕಮಾನು, ಶುಭ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇನ್ನು, ನಗರದಾದ್ಯಂತ ಜಾತ್ರೆಗೆ ಶುಭಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ದೇವಸ್ಥಾನ ಸಮಿತಿ, ವಿವಿಧ ಸಂಘಟನೆಗಳು ಜಾತ್ರೆಗೆ ಶುಭ ಕೋರುವ ಫ್ಲೆಕ್ಸ್ ಅಳವಡಿಸಿವೆ. ದೇವಸ್ಥಾನದ ಸಮೀಪದಲ್ಲಿ ವಿವಿಧ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭ ವಾಗಿದೆ.
ಪುರಾಣ ಪ್ರಸಿದ್ಧ ಗುಡ್ಡೆಕಲ್ ಅಡಿಕೃತ್ತಿಗೆ ಜಾತ್ರೆಗೆ ಶಿವಮೊಗ್ಗ ಸೇರಿದಂತೆ
ವಿವಿಧೆಡೆಯಿಂದ ಜನರು ಬರಲಿದ್ದು, ಜಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತ್ರೆ ಅಂಗವಾಗಿ ಬೆಳಿಗ್ಗೆ ೪ ಗಂಟೆಯಿಂದಲೇ ಕಾವಡಿ ಹೊತ್ತ ನೂರಾರು ಭಕ್ತರು ಕುಟುಂಬ ಸಮೇತರಾಗಿ ನಗರದ ನಾನಾ ಭಾಗದಿಂದ ಪಾದಯಾತ್ರೆ ಮೂಲಕ ಬಂದು ಹರಕೆ ತೀರಿಸಲಿದ್ದಾರೆ. ಅರಿಶಿನದ ಮಡಿ ವಸ್ತ್ರ ಧರಿಸಿದ ಮಹಿಳೆ ಯರು, ಮಕ್ಕಳು, ಹಿರಿಯರು, ಯುವಕ-ಯುವತಿಯರು ನಾನಾ ರೀತಿಯಿಂದ
ಅಲಂಕೃತಗೊಂಡ ಕಾವಡಿ ಹೊತ್ತು ಬಾಯಿಗೆ ವೇಲಾಯುಧ ಚುಚ್ಚಿಕೊಂಡು, ಕಬ್ಬಿಣದ ಮುಳ್ಳಿನ ಪಾದುಕೆ ಧರಿಸಿ ದೇವರ ನಾಮವಾದ ಹರೋಹರ ಎಂದು ಹೇಳುತ್ತಾ ಮಂಗಳ ವಾದ್ಯ ದೊಂದಿಗೆ ದೇವಸ್ಥಾನಕ್ಕೆ ತೆರಳಿ ಭಕ್ತಿ ಸಮರ್ಪಿಸಲಿದ್ದಾರೆ.
ಸಂತಸದ ವಿಷಯವೇನೆಂದರೆ ಟ್ರಸ್ಟ್ ವತಿಯಿಂದ ಗುಡ್ಡೇಕಲ್ ಗುಡ್ಡದ ಮೇಲೆ ವಿಶ್ವದಲ್ಲೇ ಅತಿ ಎತ್ತರದ ೧೫೧ ಅಡಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ವಿಗ್ರಹದ ನಿರ್ಮಾಣ ಕಾರ್ಯ ಶೀಘ್ರದಲ್ಲೆ ಆರಂಭವಾಗಲಿದೆ. ಮಂದಿನ ದಿನಗಳಲ್ಲಿ ಗುಡ್ಡೆಕಲ್ ಶ್ರೀ ಬಾಲಸುಬ್ರಮಣ್ಯ ದೇವಸ್ಥಾನ ಪ್ರವಾಸಿಗರ ತಾಣವಾಗಲಿದೆ.